ಗ್ವಾಲಿಯರ್: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದಲ್ಲಿ ನಡೆಯುತ್ತಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಅನೇಕ ಕಾರ್ಯಕರ್ತರು, ಪ್ರಮುಖರೆಲ್ಲ ಸೇರಿ ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆ ಸದ್ಯ ಮೊವ್ನಲ್ಲಿ ನಡೆಯುತ್ತಿದ್ದು, ಈ ಮಧ್ಯೆ ಭಾನುವಾರ ರಾಹುಲ್ ಗಾಂಧಿ ಬುಲೆಟ್ ಬೈಕ್ ಓಡಿಸಿ ಗಮನಸೆಳೆದರು. ರಾಹುಲ್ ಗಾಂಧಿ ಹೆಲ್ಮೆಟ್ ಹಾಕಿಕೊಂಡು, ಬುಲೆಟ್ ಬೈಕ್ನ್ನು ನೀಲಿ ಕಾರ್ಪೆಟ್ ಮೇಲೆ ಓಡಿಸುತ್ತಿದ್ದರೆ, ಅವರ ಭದ್ರತಾ ಸಿಬ್ಬಂದಿ, ಕ್ಯಾಮರಾ ಹಿಡಿದವರು, ಹಲವು ಕಾರ್ಯಕರ್ತರು ಆ ಬೈಕ್ ಮುಂದೆ ಓಡುವುದನ್ನು ವಿಡಿಯೊದಲ್ಲಿ ನೋಡಬಹುದು. ರಾಹುಲ್ ಗಾಂಧಿ ಬೈಕ್ ರೈಡ್ ಫೋಟೋಗಳನ್ನು ಕಾಂಗ್ರೆಸ್ ಶೇರ್ ಮಾಡಿಕೊಂಡಿದೆ.
ಮೊವ್ನಲ್ಲಿ ಭಾರತ್ ಜೋಡೋ ಯಾತ್ರೆಯ ಯಾತ್ರಿಕರನ್ನು ಗ್ವಾಲಿಯರ್ನ ಇಬ್ಬರು ಬೈಕ್ ರೈಡರ್ಗಳು ತಮ್ಮ ಬೈಕ್ನಲ್ಲಿ ಹಿಂಬಾಲಿಸುತ್ತಿದ್ದರು. ಅವರ ಬೈಕ್ನಲ್ಲಿ ಮಾರ್ವೆಲ್ ಎಂಬ ನಾಯಿಯೂ ಇತ್ತು. ಈ ರೈಡರ್ಗಳ ಹೆಸರು ರಜತ್ ಪರಾಶರ್ ಮತ್ತು ಸಾರ್ಥಕ್ ಎಂದಾಗಿದ್ದು, ಅವರಿಬ್ಬರೂ ಬೀದಿ ನಾಯಿಗಳನ್ನು ಕಾಳಜಿ ಮಾಡುವವರು. ಬೀದಿನಾಯಿಗಳ ಸುರಕ್ಷತೆ ಬಗ್ಗೆ ರಾಹುಲ್ ಗಾಂಧಿಯೊಂದಿಗೆ ಚರ್ಚಿಸುವ ಸಲುವಾಗಿ ಅವರು ಪಾದಯಾತ್ರೆಯನ್ನು ಹಿಂಬಾಲಿಸುತ್ತಿದ್ದರು.
ನಂತರ ರಜತ್ ಮತ್ತು ಸಾರ್ಥಕ್ ಇಬ್ಬರೂ ರಾಹುಲ್ ಗಾಂಧಿಯೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಅವರೊಂದಿಗೆ ಇದ್ದ ಶ್ವಾನವನ್ನು ರಾಹುಲ್ ಗಾಂಧಿ ಮುದ್ದು ಮಾಡಿದ್ದಾರೆ. ಬಳಿಕ ಬೈಕ್ ರೈಡ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಜತ್ ಪರಾಶರ್, ‘ರಾಹುಲ್ ಗಾಂಧಿ ಒಬ್ಬ ಅದ್ಭುತ ಮನುಷ್ಯ. ನಾನು ಅವರನ್ನು ಭೇಟಿಯಾದ ಮೇಲೆ ಅವರ ಮೇಲಿದ್ದ ಅಭಿಪ್ರಾಯ ಬದಲಾಯಿತು. ನನಗೆ ಅವರು ಪ್ರಾಣಿ ಪ್ರಿಯರು ಎಂಬುದು ಗೊತ್ತಿತ್ತು. ಅದಕ್ಕಾಗಿಯೇ ಬೀದಿ ನಾಯಿಗಳ ಸುರಕ್ಷತೆ ಬಗ್ಗೆ ಅವರೊಟ್ಟಿಗೆ ಚರ್ಚಿಸಲು ತೀರ್ಮಾನಿಸಿದ್ದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Pro Pak Slogan | ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ?