Site icon Vistara News

Viral Video | ಓಡೋಡಿ ಬಂದು ರಾಹುಲ್​ ಗಾಂಧಿಯನ್ನು ಅಪ್ಪಿಕೊಂಡ ಯುವಕ; ಆತನನ್ನು ತಳ್ಳಿ ಆಚೆಗೆ ಬಿಟ್ಟ ಪಕ್ಷದ ಕಾರ್ಯಕರ್ತರು

Bharat Jodo Yatra By Rahul Gandhi

ಪಂಜಾಬ್​​ನ ಹೋಶಿಯಾರ್​​ಪುರದಲ್ಲಿ ಭಾರತ್​ ಜೋಡೋ ಯಾತ್ರೆ ವೇಳೆ ರಾಹುಲ್​ ಗಾಂಧಿಯವರ ಭದ್ರತೆಯಲ್ಲಿ ಉಲ್ಲಂಘನೆಯಾಗಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವನೊಬ್ಬ,ರಾಹುಲ್​ ಗಾಂಧಿ ಬಳಿ ಒಮ್ಮೆಲೇ ಓಡಿ ಬಂದು ಅವರನ್ನು ಅಪ್ಪಿಕೊಳ್ಳಲು ಮುಂದಾಗಿದ್ದಾನೆ. ಬಳಿಕ ರಾಹುಲ್​ ಗಾಂಧಿ ಸುತ್ತಲೂ ಇದ್ದ, ಪಕ್ಷದ ಕಾರ್ಯಕರ್ತರೇ ಆತನನ್ನು ಹಿಡಿದು ತಳ್ಳಿ, ಆಚೆಗೆ ಕಳಿಸಿದ್ದಾರೆ. 12 ಸೆಕೆಂಡ್​ಗಳ ಈ ವಿಡಿಯೊ ವೈರಲ್ ಆಗುತ್ತಿದೆ.

ಭಾರತ್​ ಜೋಡೋ ಯಾತ್ರೆ ಇಂದು ಮುಂಜಾನೆ ಪಂಜಾಬ್​​ನ ಟಂಡಾದಲ್ಲಿ ನಡೆಯುತ್ತಿದೆ. ಹರಿಯಾಣದಿಂದ ಕಳೆದ ಬುಧವಾರ ಪಂಜಾಬ್​ಗೆ ಕಾಲಿಟ್ಟ ಭಾರತ್​ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಕಾರ್ಯಕರ್ತರ ಉತ್ಸಾಹವನ್ನು ಚಳಿಯೂ ಕುಂದಿಸುತ್ತಿಲ್ಲ. ಪಂಜಾಬ್​​ನಲ್ಲಿ ರಾಹುಲ್​ ಗಾಂಧಿಯವರೊಂದಿಗೆ ಕಾಂಗ್ರೆಸ್​​ನ ಪಂಜಾಬ್​ ಮುಖ್ಯಸ್ಥ ಅಮರಿಂದರ್​ ಸಿಂಗ್​ ರಾಜಾ ವಾರಿಂಗ್​, ಇತರ ನಾಯಕರಾದ ಹರೀಶ್​ ಚೌಧರಿ, ರಾಜ್​ಕುಮಾರ್​ ಚಬ್ಬೇವಾಲ್​ ಮತ್ತಿತರರು ಹೆಜ್ಜೆ ಹಾಕುತ್ತಿದ್ದಾರೆ. ಇಲ್ಲಿಂದ ಜಮ್ಮು-ಕಾಶ್ಮೀರ ಪ್ರವೇಶ ಮಾಡಲಿರುವ ಯಾತ್ರೆ, ಜನವರಿ 30ರ ಹೊತ್ತಿಗೆ ಮುಕ್ತಾಯಗೊಳ್ಳಲಿದೆ.

ರಾಹುಲ್​ ಗಾಂಧಿ ಭದ್ರತೆ ಬಗ್ಗೆ ಈ ಹಿಂದೆಯೇ ಕಾಂಗ್ರೆಸ್​ ಒಮ್ಮೆ ತಕರಾರು ಎತ್ತಿತ್ತು. ಭಾರತ್ ಜೋಡೋ ಯಾತ್ರೆ ಪ್ರಾರಂಭವಾದಾಗಿನಿಂದಲೂ, ಅದರಲ್ಲೂ ದೆಹಲಿಯಲ್ಲಿ ಯಾತ್ರೆ ನಡೆಯುತ್ತಿರುವಾಗ ಹಲವು ಬಾರಿ ರಾಹುಲ್​ ಗಾಂಧಿ ಭದ್ರತಾ ಉಲ್ಲಂಘನೆಯಾಗಿದೆ. ಕೇಂದ್ರ ಸರ್ಕಾರ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಕಾಂಗ್ರೆಸ್​ ನಾಯಕ ವೇಣುಗೋಪಾಲ್​ ಅವರು ಗೃಹ ಸಚಿವ ಅಮಿತ್​ ಶಾ ಅವರಗೆ ಪತ್ರ ಬರೆದಿದ್ದರು. ಅದಕ್ಕೆ ಉತ್ತರಿಸಿದ್ದ ಸಿಆರ್​ಪಿಎಫ್​ ‘ರಾಹುಲ್​ ಗಾಂಧಿಯವರ ಭದ್ರತೆಯಲ್ಲಿ ನಾವು ಯಾವುದೇ ಲೋಪ ಮಾಡಿಲ್ಲ. ಬದಲಾಗಿ ಅವರೇ ಹಲವು ಬಾರಿ ಭದ್ರತೆಯನ್ನು ಉಲ್ಲಂಘಿಸಿದ್ದಾರೆ’ ಎಂದು ಹೇಳಿತ್ತು.

ಇದನ್ನೂ ಓದಿ: ಭಾರತ್​ ಜೋಡೋ ಯಾತ್ರೆ ದೆಹಲಿಗೆ ಕಾಲಿಟ್ಟಾಗಿನಿಂದಲೂ ರಾಹುಲ್​ ಗಾಂಧಿ ಭದ್ರತೆಯಲ್ಲಿ ವೈಫಲ್ಯ; ಅಮಿತ್​ ಶಾಗೆ ಕಾಂಗ್ರೆಸ್​ ಪತ್ರ

Exit mobile version