ನವ ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದು ತಾನು ನಿರಾಳ ಆಗಿದ್ದೇನೆ ಎಂದು ಹೇಳಿದ್ದ ಸೋನಿಯಾ ಗಾಂಧಿಯವರಿಗೆ ಅವರ ಪುತ್ರ ರಾಹುಲ್ ಗಾಂಧಿ ಗೌರವ ಸಲ್ಲಿಸಿದ್ದಾರೆ. ತನ್ನ ಅಜ್ಜಿ ಇಂದಿರಾ ಗಾಂಧಿಯವರು ಸೋನಿಯಾ ಗಾಂಧಿ ಬಗ್ಗೆ ಆಡಿದ್ದ ಮಾತುಗಳನ್ನು ಸ್ಮರಿಸಿದ್ದಾರೆ. ಹಾಗೇ, ‘ನಾನು ಸೋನಿಯಾ ಗಾಂಧಿ ಪುತ್ರ ಆಗಿರುವುದಕ್ಕೆ ತುಂಬ ಹೆಮ್ಮೆ ಪಡುತ್ತೇನೆ’ ಎಂದೂ ಹೇಳಿದ್ದಾರೆ.
ಸೋನಿಯಾ ಗಾಂಧಿ ತಲೆ ಮೇಲೆ ಸೆರಗು ಹೊದ್ದು, ಪತಿ ರಾಜೀವ್ ಗಾಂಧಿಯವರೊಂದಿಗೆ ನಡೆದುಕೊಂಡು ಬರುತ್ತಿರುವ ಒಂದು ಕಪ್ಪು-ಬಿಳಿಪಿನ ಫೋಟೋ ಶೇರ್ ಮಾಡಿಕೊಂಡ ರಾಹುಲ್ ಗಾಂಧಿ ‘ನನ್ನ ಅಜ್ಜಿ ಇಂದಿರಾಗಾಂಧಿ ಒಂದು ಸಲ ನನಗೆ ಹೇಳಿದ್ದರು. ಸೋನಿಯಾ ಗಾಂಧಿ ನನಗೆ ಸ್ವಂತ ಮಗಳಿಗಿಂತಲೂ ಹೆಚ್ಚು. ನನಗೇ ಒಂದು ಮಗಳಿದ್ದರೂ ಇವಳಂತೆ ಇರುತ್ತಿರಲಿಲ್ಲ ಎಂದು ಹೊಗಳಿದ್ದರು. ಅವರ ಮಾತು ಅದೆಷ್ಟು ಸತ್ಯ ಎಂದು ನನಗೆ ಅನ್ನಿಸುತ್ತದೆ. ಸೋನಿಯಾ ಗಾಂಧಿ ಪುತ್ರನಾಗಿರುವುದು ನನಗೆ ದೊಡ್ಡ ಗೌರವ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಎಐಸಿಸಿಗೆ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಕಳೆದ 24ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಾಂಧಿಯೇತರ ಕುಟುಂಬದವರೊಬ್ಬರು ಅಧ್ಯಕ್ಷ ಗಾದಿಗೆ ಏರಿದ್ದಾರೆ. ಇಲ್ಲಿಯವರೆಗೆ ಸೋನಿಯಾ ಗಾಂಧಿ ಪಕ್ಷದ ಜವಾಬ್ದಾರಿ ಹೊತ್ತಿದ್ದರು. ಮಧ್ಯೆ ಒಮ್ಮೆ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ಏರಿದರೂ, ಅದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡು ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆಗಲೂ ಮತ್ತೆ ಪಕ್ಷದ ಮಧ್ಯಂತರ ಅಧ್ಯಕ್ಷೆಯಾಗಿ ನೇಮಕಗೊಂಡು, ಇಲ್ಲಿಯವರೆಗೆ ಮುನ್ನಡೆಸಿದ್ದು ಸೋನಿಯಾ ಗಾಂಧಿ. ಈ ಬಾರಿ ಖರ್ಗೆ ಆ ಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ: Mallikarjun Kharge | ಮಲ್ಲಿಕಾರ್ಜುನ ಖರ್ಗೆ ನೆಲಮೂಲದ ನಾಯಕ, ಸೋನಿಯಾ ಗಾಂಧಿ ಬಣ್ಣನೆ