Site icon Vistara News

ಪಟ್ಟಾಭಿಷೇಕವೆಂದು ಭಾವಿಸಿದ್ದಾರೆ ಪ್ರಧಾನಿ ಮೋದಿ: ಸಂಸತ್ ಭವನ ಲೋಕಾರ್ಪಣೆಗೆ ರಾಹುಲ್ ಗಾಂಧಿ ಟೀಕೆ

Rahul Gandhi And PM Modi With Sengol

#image_title

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಇಂದು ನೂತನ ಸಂಸತ್ ಭವನ (New Parliament House) ಲೋಕಾರ್ಪಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಟ್ವೀಟ್ ಮಾಡಿ, ವ್ಯಂಗ್ಯವಾಡಿದ್ದಾರೆ. ‘ಸಂಸತ್ತು ಎಂಬುದು ಜನರ ಧ್ವನಿ. ಆದರೆ ಈ ಹೊಸ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು ಒಂದು ಪಟ್ಟಾಭಿಷೇಕ ಸಮಾರಂಭ ಎಂದು ಭಾವಿಸಿಕೊಂಡಂತಿದೆ’ ಟೀಕಿಸಿದ್ದಾರೆ.

ಸದಾ ಕೇಂದ್ರ ಸರ್ಕಾರವನ್ನು, ಪ್ರಧಾನಿ ಮೋದಿಯನ್ನು ವ್ಯಂಗ್ಯ ಮಾಡುವ ರಾಹುಲ್ ಗಾಂಧಿ ಕಳೆದ ಎರಡು ದಿನಗಳ ಹಿಂದೆ ಟ್ವೀಟ್ ಮಾಡಿ ‘ನೂತನ ಸಂಸತ್​ ಭವನವನ್ನು ಪ್ರಧಾನಿ ಮೋದಿ ಯಾಕೆ ಉದ್ಘಾಟಿಸುತ್ತಿದ್ದಾರೆ? ರಾಷ್ಟ್ರಪತಿ ಯಾಕೆ ಉದ್ಘಾಟನೆ ಮಾಡುತ್ತಿಲ್ಲ?’ ಎಂದು ಪ್ರಶ್ನಿಸಿದ್ದರು. ಅಷ್ಟೇ ಅಲ್ಲ, ರಾಷ್ಟ್ರಪತಿಯಿಂದ ಸಂಸತ್ ಭವನ ಉದ್ಘಾಟನೆ ಮಾಡಿಸದೆ ಇರುವುದಲ್ಲದೆ, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿಲ್ಲ. ಇದು ಸಂವಿಧಾನದ ಅತ್ಯುನ್ನತ ಹುದ್ದೆಗೆ ಮಾಡಿದ ಅವಮಾನ. ಸಂಸತ್ತು ಎಂಬುದು ಸಾಂವಿಧಾನಿಕ ಮೌಲ್ಯಗಳಿಂದ ನಿರ್ಮಾಣವಾಗಬೇಕೇ ಹೊರತು, ಅಹಂಕಾರದ ಇಟ್ಟಿಗೆಗಳಿಂದ ಅಲ್ಲ’ ಎಂದೂ ಹೇಳಿದ್ದರು. ಇನ್ನು ಸಂಸತ್ ಉದ್ಘಾಟನೆ ಸಂವಿಧಾನದ ನಿಯಮಗಳಿಗೆ ಬದ್ಧವಾಗಿಲ್ಲ, ರಾಷ್ಟ್ರಪತಿಯನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡದೆ ಇರುವುದು ಅಪಚಾರ ಎಂಬ ಕಾರಣಕ್ಕೇ 20 ಪ್ರತಿಪಕ್ಷಗಳು ಈ ಸಮಾರಂಭವನ್ನು ಬಹಿಷ್ಕರಿಸಿವೆ. ಅದರಲ್ಲಿ ಕಾಂಗ್ರೆಸ್ ಕೂಡ ಒಂದು.

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿ, ‘1964ರ ಮೇ 28ರಂದು ಜವಾಹರ್​ ಲಾಲ್ ನೆಹರೂ ಅಂತ್ಯಕ್ರಿಯೆ ನಡೆಯಿತು. ಮಹಾತ್ಮ ಗಾಂಧಿಯನ್ನು ಹತ್ಯೆಗೈಯಲು ಪೂರಕವಾದ ಸೈದ್ಧಾಂತಿಕ ಸನ್ನಿವೇಶ ಸೃಷ್ಟಿಸಿಕೊಟ್ಟ ಸಾವರ್ಕರ್​ ಜನಿಸಿದ್ದು 1883ರ ಮೇ 28ರಂದು. ಇದೀಗ ಅದೇ ದಿನ ಹೊಸ ಸಂಸತ್ ಭವನ ಉದ್ಘಾಟನೆಗೊಂಡಿದೆ. ದೇಶದ ಆದಿವಾಸಿ ಸಮುದಾಯದ ಪ್ರಥಮ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸಂಸತ್ ಭವನವನ್ನು ಉದ್ಘಾಟನೆಗೊಳಿಸುವುದನ್ನು ಬಿಟ್ಟು ಪ್ರಧಾನಿ ಮೋದಿಯವರೇ ಲೋಕಾರ್ಪಣೆಗೊಳಿಸಿದ್ದಾರೆ. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲೂ ಇಲ್ಲ. ಸಂಸತ್ತಿನ ಕಾರ್ಯವಿಧಾನಗಳಿಗೆ ವಿರುದ್ಧವಾಗಿಯೇ ನಡೆದುಕೊಳ್ಳುವ, ಇಲ್ಲಿಗೆ ವಿರಳವಾಗಿ ಹಾಜರು ಕೊಡುವ ಮತ್ತು ಸ್ವಯಂ ವೈಭವೀಕರಿಸಿಕೊಳ್ಳುವ ಪ್ರಧಾನಿ ಈಗ ಹೊಸ ಸಂಸತ್​ ಭವನ ಉದ್ಘಾಟನೆ ಮಾಡಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ. ಅಂದಹಾಗೇ, ವೀರ ಸಾವರ್ಕರ್ ಜನ್ಮದಿನದಂದೇ ನೂತನ ಸಂಸತ್ ಭವನ ಲೋಕಾರ್ಪಣೆ ಮಾಡುತ್ತಿರುವುದನ್ನು ಜೈರಾಮ್ ರಮೇಶ್ ಈ ಹಿಂದೆಯೂ ಕಟುವಾಗಿ ಟೀಕಿಸಿದ್ದರು.

Exit mobile version