ನವ ದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ನಿಂದ ಆಯೋಜಿಸಿರುವ ಮೆಹಂಗೈ ಪರ್ ಹಲ್ಲಾ ಬೋಲ್ (Mehangai Par Halla Bol) ಬೃಹತ್ ಪ್ರತಿಭಟನಾ ಸಭೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದರು. ‘ಭಾರತದಲ್ಲಿ ದ್ವೇಷ ಹೆಚ್ಚುತ್ತಿದೆ. ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಯ ಭಯ ಎಲ್ಲೆಡೆ ಏರಿಕೆಯಾಗುತ್ತಿದೆ. ಬಿಜೆಪಿ ಮತ್ತು ಆರ್ಎಸ್ಎಸ್ಗಳು ದೇಶವನ್ನು ವಿಭಜಿಸುತ್ತಿವೆ. ಇಡೀ ದೇಶದಲ್ಲಿ ಎದ್ದಿರುವ ಭಯ ಮತ್ತು ದ್ವೇಷದ ವಾತಾವರಣದಿಂದ ಇಬ್ಬರು ಉದ್ಯಮಿಗಳು ಮಾತ್ರ ಲಾಭ ಪಡೆಯುತ್ತಿದ್ದಾರೆ’ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿ ಎಲ್ಲಿ ನೋಡಿದರೂ ದ್ವೇಷ, ಸಿಟ್ಟು, ಗಲಭೆಗಳೇ. ಬಡವರು, ರೈತರು, ಸಣ್ಣ ವ್ಯಾಪಾರಿಗಳು ಈ ಸರ್ಕಾರದಿಂದ ಯಾವುದೇ ಅನುಕೂಲ ಪಡೆಯುತ್ತಿಲ್ಲ. ಪ್ರಧಾನಿ ಮೋದಿ ನೋಟು ಬ್ಯಾನ್ ಮಾಡಿದ್ದರಿಂದ ಬಡವರಿಗೆ ಪ್ರಯೋಜನವಾಯಿತಾ? ಕೃಷಿ ಕಾಯ್ದೆಗಳನ್ನು ತಂದಿದ್ದರಲ್ಲ, ಅದೇನಾದರೂ ರೈತರಿಗೆ ಸಹಾಯ ಮಾಡಿತಾ? ಕೊನೆಗೂ ರೈತರೇ ಬೀದಿಗೆ ಇಳಿದು ತಮ್ಮ ಶಕ್ತಿಯನ್ನು ತೋರಿಸಬೇಕಾಯಿತು. ಪ್ರಧಾನಿ ನರೇಂದ್ರ ಮೋದಿ ತರುವ ಯೋಜನೆಗಳೆಲ್ಲ ಉದ್ಯಮಿಗಳಿಗೆ ಮಾತ್ರ ಸಹಾಯವಾಗುವಂಥದ್ದು ಎಂದು ರಾಹುಲ್ ಗಾಂಧಿ ವ್ಯಂಗ್ಯ ಮಾಡಿದರು.
ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ‘ಇವತ್ತು ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೆ ಉದ್ಯೋಗ ಸಿಗುತ್ತಿಲ್ಲ, ನಿರುದ್ಯೋಗ ಹೆಚ್ಚುತ್ತಿದೆ. ಇದನ್ನೆಲ್ಲ ಹೇಳಲು ನನಗೆ ಬೇಸರವಾಗುತ್ತಿದೆ. ಕೇಂದ್ರ ಸರ್ಕಾರದಿಂದ ಲಾಭ ಪಡೆಯುತ್ತಿರುವ ದೊಡ್ಡ ಕಾರ್ಪೋರೇಟ್ ಸಂಸ್ಥೆಗಳು ಯಾರಿಗೂ ಉದ್ಯೋಗ ಕೊಡುತ್ತಿಲ್ಲ. ಉದ್ಯೋಗ ಕೊಡುವ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಮೋದಿ ಸರ್ಕಾರ ನಾಶ ಮಾಡಿದೆ’ ಎಂದೂ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ‘ಕಾಂಗ್ರೆಸ್ 70 ವರ್ಷ ಆಡಳಿತ ನಡೆಸಿ ಏನು ಮಾಡಿತು ಎಂದು ಪ್ರಧಾನಿ ಮೋದಿ ಯಾವಾಗಲೂ ಕೇಳುತ್ತಾರೆ. ಅದಕ್ಕೆ ನಾನಿಂದು ಉತ್ತರಿಸುತ್ತೇನೆ. ಈ ದೇಶದಲ್ಲಿ ನಿತ್ಯ ವಸ್ತುಗಳ ಬೆಲೆ ಇಷ್ಟೆಲ್ಲ ಏರಲು ಕಾಂಗ್ರೆಸ್ ಎಂದಿಗೂ ಅವಕಾಶ ಕೊಡಲಿಲ್ಲ. ನಾವೀಗ ಯಾವುದೇ ವಿಷಯ ಮಾತನಾಡಿದರೂ ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ರೈತರ ಸಮಸ್ಯೆ ಬಗ್ಗೆಯೂ ಮಾತನಾಡುವಂತಿಲ್ಲ, ಚೀನಾ ದಾಳಿಯ ಬಗ್ಗೆಯೂ ಧ್ವನಿ ಎತ್ತುವಂತಿಲ್ಲ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ‘ನಾವು ಸಂಕಷ್ಟ ಹೇಳುತ್ತಿದ್ದೇವೆ, ರಾಜ ಕೇಳಬೇಕಷ್ಟೇ’; ಇಟಲಿಯಿಂದ ಬಂದ ರಾಹುಲ್ ಗಾಂಧಿ ಟ್ವೀಟ್