Site icon Vistara News

ಪ್ರಧಾನಿ ಮೋದಿಗೂ ಮುನ್ನ ಯುಎಸ್​ಎ ಪ್ರವಾಸಕ್ಕೆ ಹೊರಟು ನಿಂತ ರಾಹುಲ್ ಗಾಂಧಿ; 10ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

Rahul Gandhi

ಕಾಂಗ್ರೆಸ್ ನಾಯಕ, ವಯಾನಾಡ್ ಮಾಜಿ ಸಂಸದ ರಾಹುಲ್ ಗಾಂಧಿ (Congress Leader Rahul Gandhi) ಅವರು ಮೇ 31ರಿಂದ ಯುಎಸ್​ಎ ಪ್ರವಾಸಕ್ಕೆ ತೆರಳಲಿದ್ದಾರೆ. ಜೂನ್​ 4ರವರೆಗೆ ಅಂದರೆ, 10 ದಿನಗಳ ಕಾಲ ಅವರು ಯುಎಸ್​​ನಲ್ಲಿಯೇ ಇರಲಿದ್ದಾರೆ. ಈ ವೇಳೆ ಅವರು ನ್ಯೂಯಾರ್ಕ್​​ನಲ್ಲಿರುವ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್​​ನಲ್ಲಿ ರ್ಯಾಲಿ ಹಮ್ಮಿಕೊಳ್ಳಲಿದ್ದಾರೆ. ಈ ಭಾಗದಲ್ಲಿ ಸುಮಾರು 5000 ಎನ್​​ಆರ್​ಐ (ಭಾರತ ಮೂಲದ ಅಮೆರಿಕನ್ನರು)ಗಳು ಇದ್ದಾರೆ. ಅಲ್ಲಿ ರ್ಯಾಲಿ ನಡೆಸಿ, ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಅದಾದ ಮೇಲೆ ವಾಷಿಂಗ್ಟನ್​ ಮತ್ತು ಕ್ಯಾಲಿಫೋರ್ನಿಯಾಗಳಿಗೆ ಹೋಗಿ ಅಲ್ಲಿ ಪ್ಯಾನೆಲ್ ಡಿಸ್ಕಶನ್​ಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ಟ್ಯಾಂಡ್​​ಫೋರ್ಡ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವರು. ಅಷ್ಟಲ್ಲದೆ ಯುಎಸ್​ಎಯ ಹಲವು ರಾಜಕಾರಣಿಗಳು, ಉದ್ಯಮಿಗಳನ್ನು ರಾಹುಲ್ ಗಾಂಧಿ ಭೇಟಿ ಮಾಡುವರು. ಪ್ರಧಾನಿ ನರೇಂದ್ರ ಮೋದಿಯವರು ಜೂನ್​ 22ರಂದು ಯುಎಸ್​ಗೆ ಭೇಟಿ ಕೊಡಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್​ ಬೈಡೆನ್ ಅವರು ಶ್ವೇತ ಭವನದಲ್ಲಿ ಆಯೋಜಿಸಿರುವ ಸ್ಟೇಟ್​ ಡಿನ್ನರ್​ (ಸಾಂಪ್ರಾದಾಯಿ ಔತಣಕೂಟ)ದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮೊದಲೇ ರಾಹುಲ್ ಗಾಂಧಿಯವರು ಯುಎಸ್​ಎ ಗೆ ಭೇಟಿ ಕೊಡುತ್ತಿರುವುದು ವಿಶೇಷ ಮತ್ತು ಅಚ್ಚರಿ ಎನ್ನಿಸಿದೆ.

ಇದನ್ನೂ ಓದಿ: Budget Session: ರಾಹುಲ್​ ಗಾಂಧಿ ಲಂಡನ್​ ಹೇಳಿಕೆ ಗಲಾಟೆ; ರಾಜ್ಯಸಭೆ, ಲೋಕಸಭೆ ಕಲಾಪ ಮುಂದೂಡಿಕೆ

ರಾಹುಲ್ ಗಾಂಧಿಯವರು ‘2019ರ ಮೋದಿ ಉಪನಾಮ’ ಕೇಸ್​ನಲ್ಲಿ ಶಿಕ್ಷೆಗೆ ಗುರಿಯಾಗುವುದಕ್ಕೂ ಮೊದಲು ಅವರು ಲಂಡನ್​ಗೆ ಹೋಗಿದ್ದರು. ಭಾರತ್ ಜೋಡೋ ಯಾತ್ರೆ ಮುಗಿಯುತ್ತಿದ್ದಂತೆ ಲಂಡನ್​ಗೆ ತೆರಳಿದ್ದ ಅವರು ಅಲ್ಲಿನ ಕ್ಯಾಂಬ್ರಿಜ್ ಯೂನಿವರ್ಸಿಟಿಯಲ್ಲಿ ನಿಂತು ಮಾಡಿದ ಭಾಷಣ ವಿವಾದಕ್ಕೆ ಕಾರಣವಾಗಿತ್ತು. ‘ಭಾರತದ ಪ್ರಜಾಪ್ರಭುತ್ವ ದಾಳಿಗೆ ಒಳಗಾಗಿದೆ’ ಎಂದು ಹೇಳಿದ್ದಲ್ಲದೆ, ಭಾರತದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ ನಾಯಕರಷ್ಟೇ ಅಲ್ಲ, ದೇಶದ ಅನೇಕ ಜನರು ರಾಹುಲ್ ಗಾಂಧಿ ಮಾತುಗಳನ್ನು ಖಂಡಿಸಿದ್ದರು. ಇದೀಗ ಅವರು ಯುಎಸ್​ಎಗೆ ಹೊರಟು ನಿಂತಿದ್ದಾರೆ. ಅಲ್ಲೂ ಕೂಡ ಯೂನಿವರ್ಸಿಟಿಯಲ್ಲಿ ಮಾತನಾಡಲಿದ್ದಾರೆ.

Exit mobile version