ನವ ದೆಹಲಿ: ಬೆಲೆ ಏರಿಕೆ, ಜಿಎಸ್ಟಿ ಹೆಚ್ಚಳ, ನಿರುದ್ಯೋಗ ವಿರೋಧಿಸಿ, ಕೇಂದ್ರ ಸರ್ಕಾರದ ವಿರುದ್ಧ ಆಗಸ್ಟ್ 5ರಂದು ಕಾಂಗ್ರೆಸ್ ನಾಯಕರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಿದ್ದಾರೆ. ರಾಷ್ಟ್ರಾದ್ಯಂತ ಈ ಪ್ರತಿಭಟನೆ ನಡೆದರೂ, ದೆಹಲಿಯಲ್ಲಿ ಜೋರಾಗಿ ನಡೆದಿತ್ತು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮಲ್ಲಿಕಾರ್ಜುನ್, ಖರ್ಗೆ, ಕೆ.ಸಿ.ವೇಣುಗೋಪಾಲ್ ಸೇರಿ ಬಹುತೇಕ ಎಲ್ಲ ಗಣ್ಯರೂ ದೆಹಲಿಯಲ್ಲೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ನಾಯಕರು ಪ್ರತಿಭಟನೆ ಭಾಗವಾಗಿ ರಾಷ್ಟ್ರಪತಿ ಭವನ ಚಲೋ ಮತ್ತು ಪ್ರಧಾನಮಂತ್ರಿ ನಿವಾಸಕ್ಕೆ ಘೇರಾವ್ ಹಾಕುವ ಯೋಜನೆಯನ್ನು ರೂಪಿಸಿಕೊಂಡಿದ್ದರು. ಆದರೆ ದೆಹಲಿ ಪೊಲೀಸರು ಅವರನ್ನೆಲ್ಲ ಮಧ್ಯದಲ್ಲೇ ವಶಕ್ಕೆ ಪಡೆದು, ಪ್ರತಿಭಟನೆಯನ್ನು ಮೊಟಕುಗೊಳಿಸಿದರು. ಹೀಗೆ, ಕಾಂಗ್ರೆಸ್ಸಿಗರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಿದ್ದರ ಹಲವು ಫೋಟೋ-ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಒಂದು ಫೋಟೋವನ್ನು ಬಿಜೆಪಿ ಪೋಸ್ಟ್ ಮಾಡಿಕೊಂಡು ಪ್ರಶ್ನೆಯೊಂದನ್ನು ಎತ್ತಿದೆ.
ಕಾಂಗ್ರೆಸ್ ನಾಯಕರು ರಾಷ್ಟ್ರಪತಿ ಭವನ ಚಲೋ ಪ್ರಾರಂಭಿಸುತ್ತಿರುವಾಗ ಪೊಲೀಸರು ಅವರನ್ನು ತಡೆದು ಬಂಧಿಸಿದರು. ಆಗ ಕಾಂಗ್ರೆಸ್ ನಾಯಕರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ಏರ್ಪಟ್ಟಿತ್ತು. ಆಗ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ಸಿಗರು ಆರೋಪ ಮಾಡಿದ್ದಾರೆ. ಆದರೆ ಬಿಜೆಪಿಯ ಐಟಿ ವಿಭಾಗದ ಉಸ್ತುವಾರಿ ಅಮಿತ್ ಮಾಳವಿಯಾ ಟ್ವಿಟರ್ನಲ್ಲಿ ಫೋಟೋ ಹಂಚಿಕೊಂಡು, ‘ತಮ್ಮ ಮೇಲೆ ಪೊಲೀಸರು ಹಲ್ಲೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಆದರೆ ಈ ಫೋಟೋವನ್ನು ಸೂಕ್ಷ್ಮವಾಗಿ ನೋಡಿ. ಇದರಲ್ಲಿ ರಾಹುಲ್ ಗಾಂಧಿಯೇ ದೀಪೇಂದರ್ ಎಸ್ ಹೂಡಾ ಅವರ ಶರ್ಟ್ನ್ನು ಹಿಡಿದು ಬಲವಾಗಿ ಎಳೆಯುತ್ತಿರುವುದು ಕಾಣುತ್ತಿದೆ. ಅವರ ಶರ್ಟ್ ಹರಿಯಲು ರಾಹುಲ್ ಗಾಂಧಿ ಯತ್ನಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಲ್ಲಿ ನೋಡಿದರೆ ಪ್ರಿಯಾಂಕಾ ಗಾಂಧಿ ವಾದ್ರಾ ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿ, ಅವರ ಕೈಯನ್ನು ತಿರುಚಿದರು. ಇಲ್ಲಿ ನೋಡಿದರೆ, ರಾಹುಲ್ ಗಾಂಧಿ ಅವರದ್ದೇ ಪಕ್ಷದ ನಾಯಕನ ಅಂಗಿ ಹಿಡಿದು ಎಳೆಯುತ್ತಿದ್ದಾರೆ. ಇವರ ಹೋರಾಟವೇನು ಪ್ರಾಮಾಣಿಕವಾಗಿದೆಯೋ ಅಥವಾ ಸುಮ್ಮನೆ ತೋರುಗಣಿಕೆಯದ್ದೋ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ರಾಷ್ಟ್ರಾದ್ಯಂತ ಕಾಂಗ್ರೆಸ್ ಪದೇಪದೆ ಪ್ರತಿಭಟನೆ ನಡೆಸುತ್ತಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇ ಡಿ ವಿಚಾರಣೆ ವೇಳೆಯೂ ಇದೇ ರೀತಿ ಪ್ರತಿಭಟನೆ ನಡೆಸಿದ್ದರು. ಆಗಸ್ಟ್ 5ರಂದು ಕೂಡ ಧರಣಿ-ಪ್ರತಿಭಟನೆ ನಡೆಸಿದರು. ನಿನ್ನೆಯ ಪ್ರತಿಭಟನೆ ವೇಳೆ ಪೊಲೀಸರು ದೆಹಲಿಯಲ್ಲೇ 300ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದರು. 65 ಸಂಸದರನ್ನು ಅರೆಸ್ಟ್ ಮಾಡಿ, ಆರು ತಾಸುಗಳ ನಂತರ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: Congress Protest | ಬೆಲೆ ಏರಿಕೆ ವಿರುದ್ಧ ಬ್ಲ್ಯಾಕ್ ಆದ ಕಾಂಗ್ರೆಸ್; ಬ್ಯಾರಿಕೇಡ್ ಜಂಪ್ ಮಾಡಿದ ಪ್ರಿಯಾಂಕಾ