ನವ ದೆಹಲಿ: ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ನಿಂದ ಮೆಹಂಗಾಯ್ ಪರ್ ಹಲ್ಲಾ ಬೋಲ್ (Mehangai Par Halla Bol- ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ) ಬೃಹತ್ ಮಟ್ಟದ ಱಲಿ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಧರಣಿ ಪ್ರಾರಂಭವಾಗಿದೆ. ಕಾಂಗ್ರೆಸ್ ನಾಯಕರು-ಕಾರ್ಯಕರ್ತರು ರಾಮಲೀಲಾ ಮೈದಾನದಲ್ಲಿ ಸೇರಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣ ಕೂಡ ಮಾಡಲಿದ್ದಾರೆ. ಅದಕ್ಕೂ ಮೊದಲು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ‘ಜನರೆಲ್ಲ ಹಣದುಬ್ಬರ, ನಿತ್ಯವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಆದರೆ ರಾಜ ಸ್ನೇಹಿತರನ್ನು ಸಂಪಾದಿಸುವುದರಲ್ಲೇ ನಿರತನಾಗಿದ್ದಾನೆ. ಈ ಎಲ್ಲ ಅವ್ಯವಸ್ಥೆಗಳಿಗೆ ಪ್ರಧಾನಮಂತ್ರಿಯೇ ಹೊಣೆ. ನಾವು ಹಣದುಬ್ಬರದ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ..ರಾಜ ಕೇಳಬೇಕು’ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ತನ್ನ ತಾಯಿ ಸೋನಿಯಾ ಗಾಂಧಿ ಮತ್ತು ಸೋದರಿ ಪ್ರಿಯಾಂಕಾ ಗಾಂಧಿ ಜತೆ ಆಗಸ್ಟ್ ಕೊನೇ ವಾರದಲ್ಲಿ ಇಟಲಿಗೆ ಹೋಗಿದ್ದರು. ಆಗಸ್ಟ್ 27ರಂದು ಸೋನಿಯಾ ಗಾಂಧಿ ತಾಯಿ ಪಾವೊಲಾ ಮೈನೋ ನಿಧನರಾಗಿದ್ದಾರೆ. ಇದೀಗ ರಾಹುಲ್ ಗಾಂಧಿ ಮಾತ್ರ ಭಾರತಕ್ಕೆ ವಾಪಸ್ ಆಗಿದ್ದು, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇನ್ನೂ ಇಟಲಿಯಲ್ಲೇ ಇದ್ದಾರೆ. ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಕೇಂದ್ರೀಯ ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಂಚಾರ ನಿಯಂತ್ರಣಕ್ಕೆ ದೆಹಲಿ ಪೊಲೀಸರು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಇಂದು; ರಾಮಲೀಲಾ ಮೈದಾನದಲ್ಲಿ ರಾಹುಲ್ ಗಾಂಧಿ ಕಟೌಟ್