ನವ ದೆಹಲಿ: 2019ರಲ್ಲಿ ಮೋದಿ ಉಪನಾಮಕ್ಕೆ ಮಾಡಿದ ಅಪಮಾನದ ಕೇಸ್ನಲ್ಲಿ ದೋಷಿಯಾಗಿ, ಸಂಸದ ಸ್ಥಾನದಿಂದಲೂ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ದೆಹಲಿಯಲ್ಲಿರುವ ತಮ್ಮ ಸರ್ಕಾರಿ ಬಂಗಲೆಯನ್ನು ತೊರೆದಿದ್ದಾರೆ. ಲ್ಯುಟೆನ್ಸ್ ದೆಹಲಿಯಲ್ಲಿರುವ 12 ತುಘಲಕ್ ಲೇನ್ನಲ್ಲಿ ಇರುವ ಸರ್ಕಾರಿ ಬಂಗಲೆಯಲ್ಲಿ ರಾಹುಲ್ ಗಾಂಧಿ 2005ರಿಂದಲೂ ವಾಸವಾಗಿದ್ದರು. ಆದರೆ ಸಂಸದನ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಲೋಕಸಭಾ ವಸತಿ ಕಾರ್ಯಾಲಯ ರಾಹುಲ್ ಗಾಂಧಿಯವರಿಗೆ ನೋಟಿಸ್ ನೀಡಿ, ಏಪ್ರಿಲ್ 22ರೊಳಗೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಸೂಚಿಸಿತ್ತು. ಅದರಂತೆ ಇಂದು ಅವಧಿ ಮುಗಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಬಂಗಲೆಯನ್ನು ಬಿಟ್ಟಿದ್ದಾರೆ.
ಇಂದು ಸರ್ಕಾರಿ ಬಂಗಲೆಯನ್ನು ತೊರೆದ ಬೆನ್ನಲ್ಲೇ ಮಾಧ್ಯಮಗಳ ಜತೆ ಮಾತನಾಡಿದ ರಾಹುಲ್ ಗಾಂಧಿ ‘ನಾನು ಸತ್ಯವನ್ನು ಹೇಳಿದ್ದಕ್ಕೆ ಬೆಲೆ ತೆರುತ್ತಿದ್ದೇನೆ. ಅದಕ್ಕಾಗಿಯೇ ಬಂಗಲೆ ಬಿಡಬೇಕಾಗಿ ಬಂತು’ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಏಪ್ರಿಲ್ 11ರಂದು ಮಾತನಾಡಿದ್ದ ರಾಹುಲ್ ಗಾಂಧಿ ‘ನಾನು ಅನರ್ಹತೆಗೆಲ್ಲ ಹೆದರುವುದಿಲ್ಲ. ನನಗೆ ಸರ್ಕಾರಿ ಬಂಗಲೆಯಲ್ಲಿ ವಾಸಿಸಲು ಆಸಕ್ತಿಯೂ ಇಲ್ಲ’ ಎಂದು ಹೇಳಿದ್ದರು. ‘ಸಂಸದ ಸ್ಥಾನ ಎಂಬುದು ಒಂದು ಟ್ಯಾಗ್. ಇದೊಂದು ಸ್ಥಾನ ಮತ್ತು ಹುದ್ದೆ. ಬಿಜೆಪಿ ನನ್ನಿಂದ ಈ ಸಂಸದನ ಸ್ಥಾನ/ಟ್ಯಾಗ್/ಹುದ್ದೆಯನ್ನು ಕಿತ್ತುಕೊಳ್ಳಬಹುದು. ಮನೆಯನ್ನೂ ಕಸಿದುಕೊಂಡು ನನ್ನನ್ನು ಜೈಲಿನಲ್ಲಿ ಇಡಬಹುದು. ಆದರೆ ನಾನು ವಯಾನಾಡ್ನ ಜನರನ್ನು ಪ್ರತಿನಿಧಿಸುವುದರಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದರು.
ಇದನ್ನೂ ಓದಿ: Rahul Gandhi: ಶನಿವಾರ ಸರ್ಕಾರಿ ಬಂಗಲೆ ಖಾಲಿ ಮಾಡಲಿರುವ ‘ಅನರ್ಹ’ ರಾಹುಲ್ ಗಾಂಧಿ, ಮುಂದೇನು?
2019ರಲ್ಲಿ ಕೋಲಾರದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಇರುತ್ತದೆ ಎಂದಿದ್ದರು. ರಾಹುಲ್ ಗಾಂಧಿ ಈ ಹೇಳಿಕೆ ವಿರುದ್ಧ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸೂರತ್ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಕೇಸ್ನ ತೀರ್ಪನ್ನು ಮಾರ್ಚ್ 23ರಂದು ನೀಡಿದ್ದ ಸೂರತ್ ಕೋರ್ಟ್ ರಾಹುಲ್ ಗಾಂಧಿಯನ್ನು ದೋಷಿ ಎಂದು ಹೇಳಿತ್ತು. ಹಾಗೇ, 2ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಅದರ ಬೆನ್ನಲ್ಲೇ ರಾಹುಲ್ ಗಾಂಧಿ ಸಂಸದನ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಇನ್ನು ತಮಗೆ ಸೂರತ್ ಕೋರ್ಟ್ ಕೊಟ್ಟಿರುವ ಜೈಲು ಶಿಕ್ಷೆಗೆ ತಡೆ ನೀಡುವಂತೆ ರಾಹುಲ್ ಗಾಂಧಿ ಸೂರತ್ ಸೆಷನ್ಸ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದೂ ವ್ಯರ್ಥವಾಗಿದೆ. ಅವರ ಅರ್ಜಿಯನ್ನು ವಜಾಗೊಳಿಸುವ ಮೂಲಕ ಕೆಳ ನ್ಯಾಯಾಲಯ ಕೊಟ್ಟಿದ್ದ ತೀರ್ಪನ್ನೇ ಎತ್ತಿ ಹಿಡಿದಿದೆ. ಸದ್ಯ ತಾವಿದ್ದ ಸರ್ಕಾರಿ ಬಂಗಲೆ ತೊರೆದ ರಾಹುಲ್ ಗಾಂಧಿ, ಇನ್ಮುಂದೆ ಅಮ್ಮ ಸೋನಿಯಾಗಾಂಧಿಯವರೊಟ್ಟಿಗೆ ಅವರ ಸರ್ಕಾರಿ ಬಂಗಲೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗಿದೆ.