ನವ ದೆಹಲಿ: ಭಾರತ್ ಜೋಡೋ ಯಾತ್ರೆ ದೆಹಲಿಗೆ ಪ್ರವೇಶ ಮಾಡಿದಾಗಿನಿಂದಲೂ ಹಲವು ಬಾರಿ ಅವರ ಭದ್ರತೆಯಲ್ಲಿ ವೈಫಲ್ಯ ಉಂಟಾಗಿದೆ. ಅವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಗೃಹ ಸಚಿವ ಅಮಿತ್ ಶಾ ಅವರಿಗೆ ಕಾಂಗ್ರೆಸ್ ಪತ್ರ ಬರೆದಿತ್ತು. ಈ ಪತ್ರಕ್ಕೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಆರ್ಪಿಎಫ್) ಪ್ರತಿಕ್ರಿಯಿಸಿದೆ. ‘ಭದ್ರತಾ ವೈಫಲ್ಯ ಆಗಿಲ್ಲ. ರಾಹುಲ್ ಗಾಂಧಿಯವರೇ ಹಲವು ಸಂದರ್ಭಗಳಲ್ಲಿ ಭದ್ರತಾ ಮಾರ್ಗಸೂಚಿಗಳನ್ನು ಮತ್ತು ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಸಿಆರ್ಪಿಎಫ್ ಹೇಳಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ರಾಹುಲ್ ಗಾಂಧಿಯವರಿಗೆ ಸಿಆರ್ಪಿಎಫ್ನಿಂದ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ. ರಾಹುಲ್ ಗಾಂಧಿಯವರಿಗೆ ಇರುವ ಬೆದರಿಕೆಯ ಪ್ರಮಾಣವನ್ನಾಧರಿಸಿ, ಗೃಹ ಸಚಿವಾಲಯ ನೀಡಿರುವ ಮಾರ್ಗಸೂಚಿಯಂತೆಯೇ ರಕ್ಷಣೆ ಒದಗಿಸಿದ್ದೇವೆ. ದೆಹಲಿ ಸೇರಿ ಎಲ್ಲ ಕಡೆಗಳಲ್ಲೂ ರಾಹುಲ್ ಗಾಂಧಿ ಬರುವುದಕ್ಕಿಂತ ಮುಂಚೆಯೇ ಅಗತ್ಯ ಭದ್ರತೆ ಕಲ್ಪಿಸಲಾಗಿತ್ತು ಎಂದು ಸಿಆರ್ಪಿಎಫ್ ಪತ್ರದಲ್ಲಿ ಉಲ್ಲೇಖಿಸಿದೆ.
‘ರಾಹುಲ್ ಗಾಂಧಿಯವರು ಹಲವು ಸಂದರ್ಭಗಳಲ್ಲಿ ಭದ್ರತಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ನಾವು ಅವರಿಗೆ ಅದನ್ನು ಸೂಕ್ಷ್ಮವಾಗಿಯೇ ಹಲವು ಬಾರಿ ತಿಳಿಸಿದ್ದೇವೆ. ಅವರು ಹಲವು ಬಾರಿ ಭದ್ರತಾ ವಲಯಗಳನ್ನು ಮೀರಿ ಹೋಗಿದ್ದಾರೆ. 2020ರಿಂದ ಇಲ್ಲಿಯವರೆಗೆ ರಾಹುಲ್ ಗಾಂಧಿ 113 ಬಾರಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದೂ ಸಿಆರ್ಪಿಎಫ್ ಪತ್ರದಲ್ಲಿ ಉಲ್ಲೇಖಿಸಿದೆ.
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಡಿಸೆಂಬರ್ 24ರಂದು ದೆಹಲಿ ಪ್ರವೇಶಿಸಿದೆ. ಆಗಿನಿಂದಲೂ ರಾಹುಲ್ ಗಾಂಧಿ ಭದ್ರತೆ ವಿಷಯದಲ್ಲಿ ನಾವು ಹಲವು ಬಾರಿ ರಾಜಿಯಾಗಿದ್ದೇವೆ. ರಾಹುಲ್ ಗಾಂಧಿಗೆ Z ಪ್ಲಸ್ ಕೆಟೆಗರಿ ಭದ್ರತೆ ಇದ್ದಾಗ್ಯೂ, ಅವರಿಗೆ ಸೂಕ್ತ ರಕ್ಷಣೆ ಸಿಗಲಿಲ್ಲ. ರಾಹುಲ್ ಗಾಂಧಿ ಯಾತ್ರೆ ನಡೆಯುತ್ತಿದ್ದಾಗ ಉಂಟಾದ ಜನದಟ್ಟಣೆಯನ್ನು ತಡೆಯಲು ದೆಹಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಆ ಜನಸಂದಣಿ ಮಧ್ಯೆ ಯಾತ್ರೆಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರೇ ರಾಹುಲ್ ಗಾಂಧಿ ಸುತ್ತ ಭದ್ರತಾ ವಲಯ ಸೃಷ್ಟಿಸಿದರು. ಈ ಮೂಲಕ ಅವರಿಗೆ ರಕ್ಷಣೆ ಒದಗಿಸಿದರು. ಅದೆಲ್ಲವನ್ನೂ ದೆಹಲಿ ಪೊಲೀಸರು ಸುಮ್ಮನೆ ನಿಂತು ನೋಡುತ್ತಿದ್ದರು. ಇಷ್ಟೆಲ್ಲದರ ಮಧ್ಯೆ ಪಾದಯಾತ್ರೆಯಲ್ಲಿ ಪಾಲ್ಗೊಂಡವರನ್ನೇ ಗುಪ್ತಚರ ಇಲಾಖೆ ವಿಚಾರಣೆ ನಡೆಸಿದೆ ಎಂದು ಕಾಂಗ್ರೆಸ್ ನಾಯಕ ವೇಣುಗೋಪಾಲ್ ಅವರು ಅಮಿತ್ ಶಾರಿಗೆ ಪತ್ರ ಬರೆದು, ದೂರಿದ್ದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ದೆಹಲಿಗೆ ಕಾಲಿಟ್ಟಾಗಿನಿಂದಲೂ ರಾಹುಲ್ ಗಾಂಧಿ ಭದ್ರತೆಯಲ್ಲಿ ವೈಫಲ್ಯ; ಅಮಿತ್ ಶಾಗೆ ಕಾಂಗ್ರೆಸ್ ಪತ್ರ