ನವ ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ (Bharat Jodo Yatra)ಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ದೇಶದ ದಕ್ಷಿಣ ತುದಿಯಿಂದ ಉತ್ತರ ತುದಿಯವರೆಗೆ ರಾಹುಲ್ ಗಾಂಧಿ ಸತತ ನಾಲ್ಕು ತಿಂಗಳುಗಳ ಕಾಲ ಪಾದಯಾತ್ರೆ ಮಾಡಿದ್ದು ಸಣ್ಣವಿಷಯವಂತೂ ಖಂಡಿತ ಅಲ್ಲ.
‘ಸೆಪ್ಟೆಂಬರ್ನಲ್ಲಿ ಪಾದಯಾತ್ರೆ ಶುರು ಮಾಡಿ ಮೂರೇ ದಿನಕ್ಕೆ ರಾಹುಲ್ ಗಾಂಧಿಯವರಿಗೆ ಗಂಭೀರ ಸ್ವರೂಪದ ಮಂಡಿನೋವು ಕಾಣಿಸಿಕೊಂಡಿತ್ತಂತೆ. ಅದು ಹಲವು ದಿನ ಹಾಗೇ ಇತ್ತು, ಕೇರಳದಲ್ಲಿ ಕಾಲ್ನಡಿಗೆ ಮಾಡುವಾಗಲಂತೂ ವಿಪರೀತ ಎನ್ನಿಸುವಷ್ಟು ಮೊಣಕಾಲು ನೋವಿತ್ತು. ಒಂದು ಹಂತದಲ್ಲಿ ತನಗೆ ಇನ್ನು ಸಾಧ್ಯವಿಲ್ಲ, ‘ನನ್ನನ್ನು ಬಿಟ್ಟು ನೀವೆಲ್ಲ ಯಾತ್ರೆ ಮುಂದುವರಿಸಿ’ ಎಂದು ರಾಹುಲ್ ಗಾಂಧಿ ಉಳಿದ ಮುಖಂಡರು/ಕಾರ್ಯಕರ್ತರಿಗೆ ಹೇಳಿದ್ದರು. ಪ್ರಿಯಾಂಕಾ ಗಾಂಧಿ ಕೂಡ ಇದೇ ಸಲಹೆ ಕೊಟ್ಟಿದ್ದರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಇದನ್ನೂ ಓದಿ: Bharat Jodo Yatra: ನಾಳೆ ಭಾರತ್ ಜೋಡೋ ಯಾತ್ರೆ ಕೊನೇ ದಿನ; ಸಮಾರೋಪ ಸಮಾರಂಭದಲ್ಲಿ 12 ಪಕ್ಷಗಳು ಭಾಗಿ
ಯಾತ್ರೆಯ ಬಗ್ಗೆ ಮಾತಾಡಿದ ಕೆ.ಸಿ.ವೇಣುಗೋಪಾಲ್ ‘ಕನ್ಯಾಕುಮಾರಿಯಲ್ಲಿ ಭಾರತ್ ಜೋಡೋ ಯಾತ್ರೆಗೆ ಚಾಲನೆ ಸಿಕ್ಕು, ಮೂರನೇ ದಿನಕ್ಕೆ ಕೇರಳವನ್ನು ಪ್ರವೇಶಿಸಿತು. ಒಂದು ದಿನ ರಾತ್ರಿ ರಾಹುಲ್ ಗಾಂಧಿ ಕರೆ ಮಾಡಿ ತಮ್ಮ ಮಂಡಿನೋವಿನ ಬಗ್ಗೆ ಹೇಳಿದರು. ಹೆಜ್ಜೆ ಇಡಲು ಸಾಧ್ಯವೇ ಆಗುತ್ತಿಲ್ಲ. ಇನ್ನು ಈ ಯಾತ್ರೆಯನ್ನು ಮುಂದುವರಿಸಲು ಆಗುವುದಿಲ್ಲ ಎನ್ನಿಸುತ್ತದೆ. ಹೀಗಾಗಿ ನನ್ನ ಬದಲು ಯಾತ್ರೆಯ ನೇತೃತ್ವವನ್ನು ಇನ್ಯಾರಾದರೂ ವಹಿಸಿಕೊಳ್ಳಲಿ. ನೀವು ಬೇರೊಬ್ಬ ಕಾಂಗ್ರೆಸ್ ಮುಖಂಡನನ್ನು ನಿಯೋಜಿಸಿ ಎಂದು ಹೇಳಿದರು. ಮತ್ತೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಕರೆ ಮಾಡಿ, ‘ಇನ್ಯಾರಾದರೂ ಹಿರಿಯ ಮುಖಂಡರು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಲಿ’ ಎಂದು ಹೇಳಿದ್ದರು. ನನಗಂತೂ ರಾಹುಲ್ ಗಾಂಧಿ ಹೊರತುಪಡಿಸಿ ಯಾತ್ರೆಯನ್ನು ಕಲ್ಪಿಸಿಕೊಳ್ಳುವುದೇ ಕಷ್ಟವಾಗಿತ್ತು. ಆ ಕ್ಷಣ ದೇವರಿಗೆ ಮೊರೆ ಹೋಗಿದ್ದೆ’ ಎಂದು ಕೆ.ಸಿ.ವೇಣುಗೋಪಾಲ್ ಹೇಳಿದರು. ‘ಬಳಿಕ ರಾಹುಲ್ ಗಾಂಧಿಯವರು ಫಿಸಿಯೋಥೆರಪಿಸ್ಟ್ ಹತ್ತಿರ ಚಿಕಿತ್ಸೆ ಪಡೆದು, ಅವರು ಕೊಟ್ಟೆ ಮಾತ್ರೆ ತೆಗೆದುಕೊಂಡು ಯಾತ್ರೆ ಮುಂದುವರಿಸಿದರು’ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ 136 ದಿನಗಳು, 12 ರಾಜ್ಯಗಳು/2 ಕೇಂದ್ರಾಡಳಿತ ಪ್ರದೇಶಗಳಿಂದ 136 ಜಿಲ್ಲೆಗಳಲ್ಲಿ ಸಂಚರಿಸಿದೆ. 4000ಕ್ಕೂ ಅಧಿಕ ಕಿಲೋಮೀಟರ್ಗಳನ್ನು ಕ್ರಮಿಸಿದೆ. ಸದ್ಯಕ್ಕೆ ಅವರ ಈ ದಾಖಲೆ ಮುರಿಯುವುದು ಕಷ್ಟ.