Site icon Vistara News

ಕರ್ನಾಟಕ ಚುನಾವಣೆ ಮೇಲೆ ಕಣ್ಣಿಟ್ಟು ಹುತಾತ್ಮನಂತೆ ನಟಿಸ್ತಾ ಇರೋ ರಾಹುಲ್ ಗಾಂಧಿ: ಬಿಜೆಪಿ

rahul-gandhi-will-act-like-a-martyr-with-an-eye-on-karnataka-elections-bjp

#image_title

ಪಟಾನಾ : ಸಂಸತ್​​ನಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ (Rahul Gandhi) ತಮ್ಮ ತಪ್ಪನ್ನು ಮುಚ್ಚಿಡುವ ಜತೆಗೆ ಕರ್ನಾಟಕದ ಚುನಾವಣೆ ಮೇಲೆ ಕಣ್ಣಿಟ್ಟು ಹುತಾತ್ಮನಂತೆ ನಟಿಸುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ರವಿಶಂಕರ್​ ಪ್ರಸಾದ್ ಲೇವಡಿ ಮಾಡಿದ್ದಾರೆ. ಪಟನಾದ ಬಿಜೆಪಿ ಕಚೇರಿಯಲ್ಲಿ ಶನಿವಾರ (ಮಾರ್ಚ್​ 25ರಂದು) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಡನ್​ನಲ್ಲಿ ದೇಶದ ಸಮಗ್ರತೆಗೆ ಧಕ್ಕೆ ತರುವಂಥ ಮಾತನ್ನಾಡಿರುವ ಅವರು, ವಿಷಯದಿಂದ ತಪ್ಪಿಸಿಕೊಳ್ಳಲು ಸಂಸತ್ ಸದಸ್ಯತ್ವ ಅನರ್ಹತೆಯ ವಿಚಾರವನ್ನೇ ರಂಪ ಮಾಡಿ ಅನುಕಂಪ ಗಿಟ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅನರ್ಹತೆಗೂ ಉದ್ಯಮಿ ಗೌತಮ್​ ಅದಾನಿ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಇನ್ನೊಬ್ಬರ ಬಗ್ಗೆ ಹೀನ ಮಾತುಗಳನ್ನಾಡುವ ಚಾಳಿ ಹೊಂದಿರುವ ರಾಹುಲ್ ಗಾಂಧಿ, ಈ ಬಾರಿ ಹಿಂದುಳಿದ ಜಾತಿಯೊಂದರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ಆ ಆರೋಪಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಅಮಾಯಕರಂತೆ ವರ್ತಿಸುತ್ತಿದ್ದಾರೆ. ತಮ್ಮ ತಪ್ಪಿಗೆ ಕ್ಷಮೆ ಕೇಳದ ಕಾರಣ ಸೂರತ್​ ಕೋರ್ಟ್ ಅವರಿಗೆ ಜೈಲು ಶಿಕ್ಷೆ ವಿಧಿಸಿದೆ ಎಂದು ರವಿಶಂಕರ್​ ಪ್ರಸಾದ್​ ಕಿಡಿ ಕಾರಿದರು.

ಕಾಂಗ್ರೆಸ್​ನ ಹಿರಿಯ ನ್ಯಾಯವಾದಿಗಳು ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿಲ್ಲ ಎಂಬುದೇ ಅಚ್ಚರಿಯ ವಿಷಯ. ಅದೂ ಅಲ್ಲದೆ ಸಂಸತ್​ನಿಂದ ಅನರ್ಹಗೊಳ್ಳುವುದು ಇದೇ ಮೊದಲ ಪ್ರಕರಣವಲ್ಲ. ಆರು ಮಂದಿ ಬಿಜೆಪಿ ಸದಸ್ಯರು ಸೇರಿದಂತೆ ಇದುವರೆಗೆ ಒಟ್ಟು 32 ನಾಯಕರು ಲೋಕಸಭೆಯಿಂದ ಅನರ್ಹರಾಗಿದ್ದಾರೆ. ಆರ್​ಜೆಡಿ ನಾಯಕ ಲಾಲು ಪ್ರಸಾದ್ ಯಾದವ್​ ಕೂಡ ಈ ಪಟ್ಟಿಯಲ್ಲಿದ್ದಾರೆ. ಅಂತೆಯೇ ಪಟನಾ ಕೋರ್ಟ್​ ಸೇರಿದಂತೆ ಏಳು ಕೋರ್ಟ್​​ಗಳಲ್ಲಿ ರಾಹುಲ್ ಗಾಂಧಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್​ಗಳಿವೆ ಎಂದು ರವಿಶಂಕರ್​ ಪ್ರಸಾದ್ ಹೇಳಿದರು.

ರಾಹುಲ್ ಗಾಂಧಿಯ ಅನರ್ಹತೆಯ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್​, ಕರ್ನಾಟಕದ ಚುನಾವಣೆಯಲ್ಲಿ ಜನರ ಅನುಭೂತಿಯನ್ನು ಪಡೆಯಲು ಯತ್ನಿಸುತ್ತಿದೆ. ಇದು ತಟಸ್ಥ ನಿರ್ಧಾರವಾಗಿದ್ದು ನ್ಯಾಯಾಲಯದ ಆದೇಶದ ಮೇರೆಗೆ ಜನಪ್ರತಿನಿಧಿಗಳ ಕಾಯ್ದೆಯಡಿ ಅವರನ್ನು ಅನರ್ಹಗೊಳಿಸಲಾಗಿದೆ. ಆದಾಗ್ಯೂ, ರಾಹುಲ್ ಗಾಂಧಿ ಹಿಂದುಳಿದ ಜಾತಿಗಳ ವಿರುದ್ಧ ನೀಡುತ್ತಿರುವ ಹೇಳಿಕೆಗಳನ್ನು ಜನರ ಮುಂದೆ ಇಡುವುದಕ್ಕಾಗಿ ಬಿಜೆಪಿ ರಾಷ್ಟ್ರವ್ಯಾಪಿ ಅಭಿಯಾನ ಕೈಗೊಳ್ಳಲಿದೆ ಎಂದು ಹೇಳಿದರು.

ಇದನ್ನೂ ಓದಿ : 2013ರಲ್ಲಿ ರಾಹುಲ್‌ ಗಾಂಧಿ ಸುಗ್ರೀವಾಜ್ಞೆ ಹರಿಯದಿದ್ದರೆ ಈಗ ಅನರ್ಹರಾಗುತ್ತಿರಲಿಲ್ಲ, ಏನದು ಸುಗ್ರೀವಾಜ್ಞೆ?

ರಾಹುಲ್​ ಗಾಂಧಿ ವಿದೇಶಕ್ಕೆ ಹೋಗಿ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಮೊಸಳೆ ಕಣ್ಣೀರು ಇಡುತ್ತಿದ್ದಾರೆ. ಅವರ ಪಕ್ಷ ಸೋತಾಗ ಆ ರೀತಿ ಮಾಡುವುದು ಅವರ ಹವ್ಯಾಸ. ಚುನಾವಣೆಯಲ್ಲಿ ಕಾಂಗ್ರೆಸ್​ ಸೋತರೆ ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಹೇಳುತ್ತಾರೆ. ಚುನಾವಣಾ ಆಯೋಗ ಪಕ್ಷಪಾತಿ ಎಂದು ದೂರುತ್ತಾರೆ. ನ್ಯಾಯಾಂಗ ವ್ಯವಸ್ಥೆ ಬಲ ಕಳೆದುಕೊಂಡಿದೆ ಎಂದು ನುಡಿಯುತ್ತಾರೆ ಎಂಬುದಾಗಿ ಪ್ರಸಾದ್​ ಕಟಕಿಯಾಡಿದರು.

ಬಲಿಷ್ಠ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪಗಳನ್ನು ಮಾಡುವುದಕ್ಕೆ ಕಾಂಗ್ರೆಸ್​ಗೆ ನಾಚಿಕೆಯಾಗಬೇಕು. ಮೋದಿಯವರ ಆಡಳಿತದಲ್ಲಿ ಭಾರತ ಹೊಸ ಯುಗದತ್ತ ಸಾಗುತ್ತಿದೆ. ಅವರ ಶ್ರಮದಿಂದಾಗಿ ಭಾರತ ವಿಶ್ವದ ಐದನೇ ಶ್ರೀಮಂತ ದೇಶ ಎನಿಸಿಕೊಂಡಿದೆ. ತಮ್ಮ ಫೋನ್​ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬುದು ಕೂಡ ರಾಹುಲ್​ ಗಾಂಧಿಯ ಹಸಿ ಸುಳ್ಳಿನ ಹೇಳಿಕೆ ಎಂದು ಅವರು ಹೇಳಿದ್ದಾರೆ.

Exit mobile version