ನವ ದೆಹಲಿ: ಕಾಂಗ್ರೆಸ್ನಿಂದ ಆಯೋಜಿಸಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಧರಿಸಿರುವ ಟಿ-ಶರ್ಟ್ ಬಗ್ಗೆ ಬಿಜೆಪಿ ವ್ಯಂಗ್ಯ ಮಾಡಿದೆ. ಈ ಟಿ-ಶರ್ಟ್ ಬೆಲೆ 41 ಸಾವಿರ ರೂಪಾಯಿ ಎಂದು ಪ್ರತಿಪಾದಿಸಿರುವ ಬಿಜೆಪಿ, ‘ಬಿಳಿ ಬಣ್ಣದ ಟಿ ಶರ್ಟ್ ಧರಿಸಿರುವ ರಾಹುಲ್ ಗಾಂಧಿ ಫೋಟೋ ಮತ್ತು ಅವರು ಧರಿಸಿರುವಂಥದ್ದೇ ಮಾದರಿಯ ಟಿ ಶರ್ಟ್ ಫೋಟೋವನ್ನು ಕೊಲ್ಯಾಜ್ ಮಾಡಿ ಟ್ವೀಟ್ ಮಾಡಿ, ‘ಭಾರತವೇ..ನೋಡು’ ಎಂದು ಕ್ಯಾಪ್ಷನ್ ಬರೆದುಕೊಂಡಿದೆ. ಇದೊಂದು ಬರ್ಬೆರ್ರಿ ಎಂಬ ಬ್ರ್ಯಾಂಡ್ನ ಶರ್ಟ್ ಆಗಿದ್ದು, ಅದರ ಕೆಳಗೆ 41 ಸಾವಿರ ರೂ. ಎಂದು ಬರೆದಿರುವುದನ್ನು ನೋಡಬಹುದು.
ಇನ್ನು ರಾಹುಲ್ ಗಾಂಧಿಯನ್ನು ಟೀಕಿಸಿದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ. ‘ಭಾರತ್ ಜೋಡೋ ಯಾತ್ರೆಯಲ್ಲಿ ನೆರೆದಿರುವ ಜನ ಸಮೂಹ, ಕಾಂಗ್ರೆಸ್ಗೆ ಸಿಗುತ್ತಿರುವ ಜನಬೆಂಬಲ ನೋಡಿ ಬಿಜೆಪಿಗೆ ಭಯವಾಯಿತೇ? ನೀವು ನಿರುದ್ಯೋಗ, ಹಣದುಬ್ಬರ ಮತ್ತಿತರ ಸಮಸ್ಯೆಗಳ ಬಗ್ಗೆ ಮಾತನಾಡಿ. ಅದು ಬಿಟ್ಟು ಬಟ್ಟೆಯ ಬಗ್ಗೆ ಮಾತನಾಡುತ್ತೀರಿ ಎಂದಾದರೆ, ನಾವು ಮೋದಿ ಜೀ ಅವರ 10 ಲಕ್ಷ ರೂ. ಬೆಲೆಬಾಳುವ ಸೂಟ್ ಮತ್ತು 1.5 ಲಕ್ಷ ರೂಪಾಯಿಯ ಕನ್ನಡಕದ ಬಗ್ಗೆ ಮಾತು ಎತ್ತಬೇಕಾಗುತ್ತದೆ, ಹೇಳಿ ಏನು ಮಾಡೋಣ?’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: Bharat Jodo Yatra | 3ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ; ರೈತರೊಂದಿಗೆ ರಾಹುಲ್ ಗಾಂಧಿ ಸಂವಾದ