ಮಧ್ಯಪ್ರದೇಶದಲ್ಲೊಬ್ಬಳು 36ವರ್ಷದ ಸರ್ಕಾರಿ ಅಧಿಕಾರಿಯ (Madhya Pradesh Government Officer ಮನೆಯ ಮೇಲೆ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಲೋಕಾಯುಕ್ತ ವಿಶೇಷ ಪೊಲೀಸ್ ತಂಡ ದಾಳಿ ನಡೆಸಿದಾಗ ಭರ್ಜರಿ ಸಂಪತ್ತು ಪತ್ತೆಯಾಗಿದೆ. ಐದಾರು ಐಷಾರಾಮಿ ಕಾರುಗಳು ಸೇರಿ ಒಟ್ಟು 20 ವಾಹನಗಳು, 20 ಸಾವಿರ ಚದರ್ ಅಡಿ ಭೂಮಿ, ಎರಡು ಡಜನ್ಗಳಷ್ಟು ಬೆಲೆ ಬಾಳುವ ಗಿರ್ ತಳಿಯ ಹಸುಗಳು, 30 ಲಕ್ಷ ರೂಪಾಯಿ ಮೌಲ್ಯದ, 98 ಇಂಚ್ನ ಟಿವಿ ಸಿಕ್ಕಿದೆ. ಆದರೆ ಇಷ್ಟೆಲ್ಲ ಸಂಪತ್ತು ಹೊಂದಿರುವ ಆ ಮಹಿಳಾ ಅಧಿಕಾರಿಯ ತಿಂಗಳ ಸಂಬಳ ಕೇವಲ 30 ಸಾವಿರ ರೂಪಾಯಿ..!
ಅಧಿಕಾರಿ ಹೆಸರು ಹೇಮಾ ಮೀನಾ ಎಂದಾಗಿದ್ದು, ಮಧ್ಯಪ್ರದೇಶ ಪೊಲೀಸ್ ವಸತಿ ಕಾರ್ಪೋರೇಶನ್ನ ಉಸ್ತುವಾರಿ ಅಸಿಸ್ಟಂಟ್ ಇಂಜಿನಿಯರ್ ಆಗಿದ್ದಾರೆ. ಉದ್ಯೋಗಕ್ಕೆ ಸೇರಿ 10ವರ್ಷವಾಗಿದೆಯಷ್ಟೇ. ಈಗಲೇ ಆಕೆ ಮತ್ತು ಅವರ ಕುಟುಂಬದ ಹೆಸರಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಗಳಿಕೆಯಾಗಿದೆ. ಈಕೆ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದರಿಂದ ಲೋಕಾಯುಕ್ತ ಸ್ಪೆಶಲ್ ಪೊಲೀಸ್ ಎಷ್ಟಾಬ್ಲಿಶ್ಮೆಂಟ್ ಸಿಬ್ಬಂದಿ ರೇಡ್ ಮಾಡಿದ್ದರು. ಸೋಲಾರ್ ಪ್ಯಾನೆಲ್ನ್ನು ರಿಪೇರಿ ಮಾಡುವವರ ಸೋಗಿನಲ್ಲಿ ಬಂಗಲೆ ಪ್ರವೇಶ ಮಾಡಿದ್ದರು. ಅದೊಂದು ದೊಡ್ಡ ಬಂಗಲೆಯಾಗಿದ್ದು ಅಲ್ಲಿ ಸಂಪೂರ್ಣವಾಗಿ ವೈರ್ಲೆಸ್ ಸಂಪರ್ಕ ವ್ಯವಸ್ಥೆಯಿದೆ. ಮೊಬೈಲ್ ಜಾಮರ್ನಂಥ ಹಲವು ಬೆಲೆಬಾಳುವ ವ್ಯವಸ್ಥೆಗಳು ಸಿಕ್ಕಿವೆ. 100 ನಾಯಿಗಳೂ ಕೂಡ ಇವೆ..!
ಇದನ್ನೂ ಓದಿ: RCP Singh: ಭ್ರಷ್ಟಾಚಾರ ಆರೋಪ ಹೊತ್ತು ಜೆಡಿಯು ತೊರೆದಿದ್ದ ಆರ್ಸಿಪಿ ಸಿಂಗ್ ಬಿಜೆಪಿ ಸೇರ್ಪಡೆ
ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ ಹೋದ ತಂಡದವರು ಮೊದಲ ದಿನ ಆ ಮಹಿಳಾ ಅಧಿಕಾರಿಯ ಮನೆಯಲ್ಲಿ ಸುಮಾರು 7 ಕೋಟಿ ರೂಪಾಯಿ ಮೌಲ್ಯದ ಸಂಪತ್ತನ್ನು ಪತ್ತೆ ಹಚ್ಚಿದೆ. ಆಕೆಯ ನೈಜ ಆದಾಯಕ್ಕಿಂತಲೂ ಈ ಸಂಪತ್ತು ಶೇ.232ಕ್ಕಿಂತಲೂ ಹೆಚ್ಚು ಎಂದು ಹೇಳಲಾಗಿದೆ. ಮೀನಾ ಅವರು ಮೊಟ್ಟಮೊದಲು ತಮ್ಮ ತಂದೆಯ ಹೆಸರಲ್ಲಿ 20 ಸಾವಿರ ಚದರಮೀಟರ್ ಕೃಷಿ ಭೂಮಿಯನ್ನು ಖರೀದಿಸಿದ್ದಳು. ಅದಾದ ಮೇಲೆ 1 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಕಟ್ಟಿಸಿದ್ದಾಳೆ. ವಿವಿಧ ಕಡೆ ಆಕೆಯದ್ದೇ ಹೆಸರಲ್ಲಿ ಭೂಮಿ ಇವೆ ಎಂದೂ ಮಾಹಿತಿ ಸಿಕ್ಕಿದೆ. ಅಷ್ಟೇ ಅಲ್ಲ, ಕೃಷಿಗೆ ಸಂಬಂಧಪಟ್ಟ ಉಪಕರಣಗಳನ್ನೂ ದೊಡ್ಡಮಟ್ಟದಲ್ಲಿ ಜಪ್ತಿ ಮಾಡಲಾಗಿದೆ. ಈಕೆಯ ಕೇಸ್ನ ತನಿಖೆಯನ್ನು ಚುರುಕಾಗಿ ನಡೆಸಲಾಗುತ್ತಿದೆ.