ಐಜ್ವಾಲ್: ಮಿಜೋರಾಂನ ಸೈರಾಂಗ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಸೇತುವೆ ಕುಸಿತಗೊಂಡಿರುವ ದುರ್ಘಟನೆ ಬುಧವಾರ ನಡೆದಿದೆ. ಈ ಘಟನೆಯಲ್ಲಿ (Railway Bridge Collapse) 17 ಕಾರ್ಮಿಕರು ಮೃತಪಟ್ಟಿದ್ದು, ಇನ್ನೂ ಅನೇಕರು ಸೇತುವೆಯ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ.
ರಾಜ್ಯ ರಾಜಧಾನಿಯಾದ ಐಜ್ವಾಲ್‌ನಿಂದ 21 ಕಿ.ಮೀ ದೂರದಲ್ಲಿರುವ ಸೈರಾಂಗ್ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದ ರೈಲ್ವೆ ಸೇತುವೆ ಕುಸಿದು ಬಿದ್ದಿದೆ. ಬುಧವಾರ ಬೆಳಗ್ಗೆ 11 ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದೆ. ಹಲವಾರು ವರ್ಷಗಳಿಂದ ಈ ಸೇತುವೆಯ ಕಾಮಗಾರಿ ನಡೆಯುತ್ತಿತ್ತು. ಸುಮಾರು 40 ಕಾರ್ಮಿಕರು ಸೇತುವೆ ಮೇಲೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅದರಲ್ಲಿ ಈಗಾಗಲೇ 17 ಕಾರ್ಮಿಕರ ಮೃತದೇಹಗಳನ್ನು ಹೊರಗೆ ಎಳೆದು ತೆಗೆಯಲಾಗಿದೆ. ಇನ್ನೂ ಎಷ್ಟು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎನ್ನುವ ಮಾಹಿತಿಯಿಲ್ಲ. ಕಾಣೆಯಾಗಿರುವ ಕಾರ್ಮಿಕರಿಗಾಗಿ ಹುಡುಕಾಟವನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: Viral video: ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಬೆಂಕಿ ಎಸೆದು ಕೋಲಾಹಲ ಸೃಷ್ಟಿಸಿದ ಮಹಿಳೆ!
ಈ ಬಗ್ಗೆಡ ಈಶಾನ್ಯ ಫ್ರಂಟಿಯರ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿರುವ ಸಬ್ಯಸಾಚಿ ಡಿ ಅವರು ಮಾಹಿತಿ ನೀಡಿದ್ದಾರೆ. “ಈಶಾನ್ಯ ಭಾಗದ ಎಲ್ಲ ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಈ ಸೇತುವೆಯನ್ನು ನಿರ್ಮಿಸುತ್ತಿತ್ತು. ಕೆಲವು ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಸೇತುವೆ ಬುಧವಾರ ಬೆಳಗ್ಗೆ 11 ಗಂಟೆಗೆ ಕುಸಿದು ಬಿದ್ದಿದೆ. ಈ ಅಪಘಾತದ ಹಿಂದಿನ ಕಾರಣ ಏನು ಎಂದು ತಿಳಿದು ಬಂದಿಲ್ಲ. ಹಾಗೆಯೇ ಎಷ್ಟು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ” ಎಂದು ಅವರು ತಿಳಿಸಿದ್ದಾರೆ.
ಕುಸಿದು ಬಿದ್ದಿರುವ ಸೇತುವೆಯನ್ನು ಕುರುಂಗ್ ನದಿಗೆ ಅಡ್ಡವಾಗಿ ನಿರ್ಮಿಸಲಾಗುತ್ತಿತ್ತು. ಬೈರಾಬಿ ಮತ್ತು ಸೈರಾಂಗ್ ರೈಲು ನಿಲ್ದಾಣಗಳ ನಡುವೆ ಈ ಸೇತುವೆ ನಿರ್ಮಾಣವಾಗುತ್ತಿತ್ತು. ಸೇತುವೆಯ ಎತ್ತರ 104 ಮೀ. ಆಗಿತ್ತು.
ಈ ಘಟನೆಯ ಕುರಿತಾಗಿ ಮಿಜೋರಾಂನ ಮುಖ್ಯಮಂತ್ರಿ ಝೋರಂತಂಗ ಅವರು ದುಃಖ ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು “ಐಜ್ವಾಲ್ ಬಳಿಯ ಸೈರಾಂಗ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಮೇಲ್ಸೇತುವೆ ಕುಸಿದಿದೆ. ಕನಿಷ್ಠ 15 ಕಾರ್ಮಿಕರು ಸಾವನ್ನಪ್ಪಿದ್ದಾರೆ. ರಕ್ಷಣೆ ಕಾರ್ಯ ನಡೆಯುತ್ತಿದೆ. ಈ ದುರಂತದಿಂದ ನಾನು ತೀವ್ರವಾಗಿ ದುಃಖಿತನಾಗಿದ್ದೇನೆ. ಎಲ್ಲ ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ” ಎಂದು ಹೇಳಿದ್ದಾರೆ.