ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವರುಣನ ಆರ್ಭಟ ಶನಿವಾರವೂ ಮುಂದುವರಿದಿದೆ. ಯಮುನೆ ಉಕ್ಕಿ ಹರಿಯುತ್ತಿದ್ದು, ನದಿ ನೀರು ಕೆಂಪು ಕೋಟೆಗೆ ನುಗ್ಗಿದೆ. ಸುಪ್ರೀಂ ಕೋರ್ಟ್ ಸಮೀಪವೂ ಪ್ರವಾಹ ಉಂಟಾಗಿದೆ. ಇನ್ನು ಜನರ ಪಾಡಂತೂ ಹೇಳತೀರದಾಗಿದೆ. ಮನೆ ತುಂಬ ನೀರು ತುಂಬಿದೆ. ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಅಡುಗೆ ಮಾಡಿಕೊಳ್ಳಲು, ಅಗತ್ಯ ವಸ್ತುಗಳನ್ನು ಖರೀದಿಸಲು ಕೂಡ ಆಗುತ್ತಿಲ್ಲ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, ಪ್ರವಾಹದ ನೀರಿನಲ್ಲಿ ಸ್ನಾನ ಮಾಡಲು ಹೋದ ಮೂವರು ಮಕ್ಕಳು ಮುಳುಗಿ ಮೃತಪಟ್ಟಿದ್ದಾರೆ.
ದೆಹಲಿಯ ಮುಕುಂದಪುರ ಚೌಕ್ ಬಳಿ ಮೆಟ್ರೊ ಕಾಮಗಾರಿ ನಡೆಯುತ್ತಿದ್ದು, ಹಳ್ಳದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಇದನ್ನು ಕಂಡ ಮೂವರು ಮಕ್ಕಳು ಸ್ನಾನ ಮಾಡಲು ಹೋಗಿದ್ದಾರೆ. ಇದೇ ವೇಳೆ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಖಿಲ್ (10), ಪಿಯೂಷ್ (13) ಹಾಗೂ ಆಶಿಶ್ (13) ಮೃತರು. ಮಕ್ಕಳು ಮೃತಪಟ್ಟ ಕಾರಣ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮೆಟ್ರೊ ಕಾಮಗಾರಿ ಸ್ಥಳದಲ್ಲಿ ಸುರಕ್ಷತಾ ಕ್ರಮ ತೆಗೆದುಕೊಳ್ಳದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರಿದ ಪ್ರವಾಹದ ಸ್ಥಿತಿ
#WATCH | The flood situation in Delhi's Yamuna Bazaar area remains grim pic.twitter.com/rLO9n0NjXK
— ANI (@ANI) July 15, 2023
ಘಟನೆ ಸಂಬಂಧ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಸ್ಪಷ್ಟನೆ ನೀಡಿದೆ. “ಮೆಟ್ರೊ ಕಾಮಗಾರಿ ಸ್ಥಳದಲ್ಲಿ ಸ್ನಾನ ಮಾಡಲು ಹೋಗಿ ಮಕ್ಕಳು ಮೃತಪಟ್ಟಿರುವ ಯಾವುದೇ ಘಟನೆ ಸಂಭವಿಸಿಲ್ಲ. ಅಧಿಕಾರಿಗಳ ಹೊರತಾಗಿ ಯಾರೂ ಮೆಟ್ರೊ ಕಾಮಗಾರಿ ಸ್ಥಳಕ್ಕೆ ತೆರಳದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಹಾಗಾಗಿ, ಮಕ್ಕಳು ಅಲ್ಲಿಗೆ ಹೋಗಿಲ್ಲ” ಎಂದು ಸ್ಪಷ್ಟನೆ ನೀಡಿದೆ. ಆದರೆ, ಮಕ್ಕಳು ಮೃತಪಟ್ಟಿರುವ ಕುರಿತು ಪೊಲೀಸ್ ಅಧಿಕಾರಿಗಳೇ ಮಾಹಿತಿ ನೀಡಿರುವುದರಿಂದ ಪ್ರಕರಣವು ಗೊಂದಲಕ್ಕೀಡುಮಾಡಿದೆ.
ಇದನ್ನೂ ಓದಿ: Rain News: ಮಳೆಗೆ ಹಿಮಾಚಲ ಪ್ರದೇಶದಲ್ಲಿ 81 ಸಾವು; ಯಮುನೆ ಅಪಾಯಕಾರಿ, ಕೇಜ್ರಿವಾಲ್ ತುರ್ತು ಸಭೆ
ನಿಲ್ಲುವುದಿಲ್ಲ ವರುಣನ ಆರ್ಭಟ
ದೆಹಲಿಯಲ್ಲಿ ದಿನೇದಿನೆ ಮಳೆ ಜಾಸ್ತಿಯಾಗುತ್ತಿದ್ದು, ಶನಿವಾರವೂ ವರುಣನ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಶನಿವಾರ ಹಾಗೂ ಭಾನುವಾರವೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ. ಯಮುನಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನೀರಿನ ಪ್ರಮಾಣ 208 ಮೀಟರ್ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಾಗಿ, ರಾಷ್ಟ್ರ ರಾಜಧಾನಿಯ ಜನ ಇನ್ನೂ ಕೆಲವು ದಿನ ಸಂಕಷ್ಟದಲ್ಲೇ ಕಾಲ ಕಳೆಯುವ ಪರಿಸ್ಥಿತಿ ಎದುರಾಗಿದೆ.