Site icon Vistara News

Rain News: ಉತ್ತರ ಭಾರತದಲ್ಲಿ ಅಬ್ಬರದ ವರುಣ, 37ಜನರ ಮರಣ; ನಲುಗುತ್ತಿದೆ ಹಿಮಾಚಲ

North India floods Effect

ಮಳೆಯ ಅಬ್ಬರಕ್ಕೆ ಉತ್ತರ ಭಾರತ ಅಕ್ಷರಶಃ ನಲುಗುತ್ತಿದೆ. ಮಳೆ (Rain News) ಸಂಬಂಧಿ ಅನಾಹುತಗಳಿಗೆ ಇದುವರೆಗೆ ಉತ್ತರ ಭಾರತದಲ್ಲಿ 37 ಮಂದಿ ಮೃತಪಟ್ಟಿದ್ದಾರೆ. ಎಲ್ಲಿ ನೋಡಿದರೂ ತುಂಬಿ ಹರಿಯುತ್ತಿರುವ ನೀರು, ಪ್ರವಾಹ, ಭೂಕುಸಿತ. ಅದರಲ್ಲೂ ಹಿಮಾಚಲ ಪ್ರದೇಶದಲ್ಲಿ ಮಳೆ (Himachal Pradesh Rain) ತಂದೊಡ್ಡಿದ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಅತಿಹೆಚ್ಚು ಸಾವಾಗಿದ್ದೂ ಇಲ್ಲೇ. ಹಿಮಾಚಲ ಪ್ರದೇಶದಲ್ಲಿ ಕಳೆದ 2ದಿನಗಳಲ್ಲಿ 18 ಮಂದಿ ಮೃತಪಟ್ಟಿದ್ದಾರೆ. ಪಂಜಾಬ್​​ನಲ್ಲಿ 9 ಮಂದಿ, ರಾಜಸ್ಥಾನದಲ್ಲಿ 7 ಮತ್ತು ಉತ್ತರ ಪ್ರದೇಶದಲ್ಲಿ ಮೂರು ಮಂದಿ ಅಸುನೀಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಅಪಾಯದ ಮಟ್ಟ ಮೀರಿ, ಮೈದುಂಬಿ ಹರಿಯುತ್ತಿರುವ ಬಿಯಾಸ್ ನದಿ, ಟ್ರಕ್​ವೊಂದನ್ನು ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ.

ಹಿಮಾಚಲ ಪ್ರದೇಶದ ಸೋಲನ್, ಶಿಮ್ಲಾ, ಸಿರ್​ಮೌರ್​, ಕುಲ್ಲು, ಮಂಡಿ, ಕಿನ್ನೌರ್​, ಲಾಹೌಲ್​ನಲ್ಲಿ ಮುಂದಿನ 24ಗಂಟೆಗಳ ಕಾಲ ರೆಡ್​ ಅಲರ್ಟ್​ ಇರಲಿದೆ. ಹಾಗೇ, ಉನಾ, ಹಮೀರ್​ಪುರ, ಕಂಗ್ರಾ, ಚಂಬಾಗಳಲ್ಲಿ ಮುಂದಿನ 24ಗಂಟೆಗೆ ಆರೆಂಜ್ ಅಲರ್ಟ್​ ಘೋಷಣೆಯಾಗಿದೆ. ಮಂಡಿ, ಕಿನ್ನೌ್​, ಲಾಹೌಲ್​ ಸ್ಪಿಟಿಯಲ್ಲಿ ಪ್ರವಾಹ ಉಂಟಾಗುವ ಎಚ್ಚರಿಕೆ ನೀಡಲಾಗಿದೆ. ಹಿಮಾಚಲ ಪ್ರದೇಶದ ಭೀಕರ ಮಳೆಯಿಂದಾಗಿ ರಾಜ್ಯದ 12 ಬೃಹತ್ ಸೇತುವೆಗಳಿಗೆ ಹಾನಿಯಾಗಿದೆ. ಒಟ್ಟಾರೆಯಾಗಿ ಹಾನಿಯಾದ ಮೂಲಸೌಕರ್ಯಗಳ ವೆಚ್ಚ ಸುಮಾರು 3 ಸಾವಿರ ಕೋಟಿಯಿಂದ 4 ಸಾವಿರ ಕೋಟಿ ರೂ. ಎಂದು ಹೇಳಲಾಗಿದೆ. ಮಂಡಿಯಲ್ಲಿರುವ ಪಂಚವಕ್ತ್ರ ದೇಗುಲದ ಬಳಿ ಸೋಮವಾರ ಅಬ್ಬರದ ಪ್ರವಾಹ ಇತ್ತು. ಅದು ಇಂದು ತುಸುಮಟ್ಟಿಗೆ ತಗ್ಗಿದೆ.

ಉತ್ತರ ಭಾರತದಲ್ಲಿ ಹಿಮಾಚಲ ಪ್ರದೇಶ, ಪಂಜಾಬ್​, ಉತ್ತರಾಖಂಡ್​, ಹರ್ಯಾಣಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜತೆಗೆ ಭಾರತೀಯ ಸೇನೆ ಯೋಧರೂ ಕೂಡ ಜನಸಾಮಾನ್ಯರ ರಕ್ಷಣೆಯಲ್ಲಿ ಕೈಜೋಡಿಸಿದ್ದಾರೆ. ಪೊಲೀಸರು, ಹೋಮ್​ಗಾರ್ಡ್​ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಚಂದರ್ತಾಲ್, ಪಾಗಲ್ ನಲ್ಲಾ, ಲಾಹೌಲ್​ ಮತ್ತು ಸ್ಪಿಟಿಗಳಲ್ಲಿ ಒಟ್ಟು 300 ಪ್ರವಾಸಿಗರು ಸಿಕ್ಕಿಬಿದ್ದಿದ್ದಾರೆ. ಅವರನ್ನು ರಕ್ಷಣೆ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ. ಹಾಗೇ, ಉನಾ ಜಿಲ್ಲೆಯ ಲಾಲ್ಸಿಂಗಿ ಎಂಬಲ್ಲಿ ಜಲಾವೃತ ಪ್ರದೇಶದಲ್ಲಿ ಸಿಲುಕಿದ್ದ 515 ಕಾರ್ಮಿಕರನ್ನು ಪೊಲೀಸರು, ಹೋಂ ಗಾರ್ಡ್​ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಹಾಗೇ, ಜಮ್ಮುವಿನಲ್ಲಿ ಅದರಲ್ಲೂ ಭಗವತಿನಗರದಲ್ಲಿ 7000ಕ್ಕೂ ಅಧಿಕ ಯಾತ್ರಾರ್ಥಿಗಳು ಸಿಲುಕಿದ್ದಾರೆ. ರಾಂಬನ್​ ಜಿಲ್ಲೆಯ ಚಂದೇರ್​ಕೋಟ್​​ ಬೇಸ್​ ಕ್ಯಾಂಪ್​​ನಲ್ಲಿ 5000ಕ್ಕೂ ಹೆಚ್ಚು ಯಾತ್ರಾರ್ಥಿಗಳು ಇದ್ದಾರೆ.

ಇದನ್ನೂ ಓದಿ: Delhi Rain: ಮಳೆ ಪ್ರವಾಹದಲ್ಲಿ ಮುಳುಗುತ್ತಿದೆ ಉತ್ತರ ಭಾರತ; ಕಾಶ್ಮೀರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಯೋಧರು

ಪಂಜಾಬ್​, ಹರ್ಯಾಣ, ಚಂಡಿಗಢ್​​, ಉತ್ತರಾಖಂಡ್​ಗಳಲ್ಲೂ ವಿಪರೀತ ಮಳೆಯಾಗುತ್ತಿದೆ. ಪಂಜಾಬ್​ನಲ್ಲಿ ವಿವಿಧ ಜಲಾವೃತ ಭಾಗಗಳಲ್ಲಿ ಸಿಲುಕಿದ್ದ 910 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಉತ್ತರಾಖಂಡ್​ನಲ್ಲಿ ಹಲವು ಭಾಗಗಳಲ್ಲಿ ಭೂಕುಸಿತವಾಗುತ್ತಿದೆ. ಇಡೀ ಉತ್ತರ ಭಾರತಾದಾದ್ಯಂತ ಹಲವು ಹೆದ್ದಾರಿಗಳು ಬ್ಲಾಕ್ ಆಗಿವೆ. ರಸ್ತೆ ಸಂಚಾರ, ಜನ ಸಂಚಾರ ಸಾಧ್ಯವಾಗುತ್ತಿಲ್ಲ.

Exit mobile version