ನವದೆಹಲಿ: ಭಾರಿ ಮಳೆಗೆ ಉತ್ತರ ಭಾರತದ ಹಲವು ರಾಜ್ಯಗಳು ಸಂಕಷ್ಟಕ್ಕೆ ಸಿಲುಕಿವೆ. ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ, ಪಂಜಾಬ್, ಹರಿಯಾಣ ಸೇರಿ ಹಲವು ರಾಜ್ಯಗಳಲ್ಲಿ ವರುಣನ ಆರ್ಭಟ ಗುರುವಾರವೂ ಮುಂದುವರಿದಿದೆ. ಇನ್ನು ದೆಹಲಿಯಲ್ಲಂತೂ ಪ್ರವಾಹದ ಭೀತಿ ಹೆಚ್ಚಾಗಿದೆ. ಯಮುನಾ ನದಿಯ ನೀರಿನ ಪ್ರಮಾಣವು ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದ ಕಾರಣ ಪ್ರವಾಹದ ಭೀತಿ ಎದುರಾಗಿದೆ. ಅದರಲ್ಲೂ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಬಳಿಯೇ ಪ್ರವಾಹ ಉಂಟಾಗಿದೆ.
ಯಮುನಾ ನದಿ ನೀರಿನ ಪ್ರಮಾಣವು ಗುರುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ದಾಖಲೆಯ 208.46 ಮೀಟರ್ ಆಗಿದೆ. ನದಿಯ ನೀರ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ಸಿವಿಲ್ ಲೈನ್ಸ್ ಏರಿಯಾದ ರಿಂಗ್ ರೋಡ್ ಬಳಿಯೇ ಹೆಚ್ಚಿನ ನೀರು ಸಂಗ್ರಹವಾಗಿದ್ದು, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸಕ್ಕೂ ನೀರು ನುಗ್ಗುವ ಸಾಧ್ಯತೆ ಇದೆ. ರಿಂಗ್ ರೋಡ್‌ನಿಂದ ಕೇವಲ 500 ಮೀಟರ್ ದೂರದಲ್ಲಿ ಕೇಜ್ರಿವಾಲ್ ನಿವಾಸವಿದೆ.
#YamunaFloods #delhiflood pic.twitter.com/3coPpQ2qQr
— The Professor (@theprofessorinc) July 13, 2023
ದೆಹಲಿಯ ಬಹುತೇಕ ಭಾಗಗಳಲ್ಲಿ ಈಗಾಗಲೇ ಪ್ರವಾಹ ಸೃಷ್ಟಿಯಾಗಿದೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಮನೆಗಳಿಗೆ ನೀರು ನುಗ್ಗಿ ಜನ ಪರಿತಪಿಸುವಂತಾಗಿದೆ. ಬೋಟ್‌ಗಳ ಮೂಲಕ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲಾಗುತ್ತಿದೆ. ಇನ್ನು, ಬ್ಯಾರೇಜ್‌ನಿಂದ ನೀರು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ದೆಹಲಿ ಸರ್ಕಾರ ಮನವಿ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ, ಬ್ಯಾರೇಜ್‌ನಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಬೇಕು ಎಂದಿದೆ.
ಇದನ್ನೂ ಓದಿ: Rain News: ಮಳೆಗೆ ಹಿಮಾಚಲ ಪ್ರದೇಶದಲ್ಲಿ 81 ಸಾವು; ಯಮುನೆ ಅಪಾಯಕಾರಿ, ಕೇಜ್ರಿವಾಲ್ ತುರ್ತು ಸಭೆ
ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ ಸೇರಿ ಹಲವೆಡೆ ಭಾರಿ ಮಳೆ ಮುಂದುವರಿದಿದೆ. ಹಿಮಾಚಲ ಪ್ರದೇಶದಲ್ಲಿ ದಿನೇದಿನೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ಇದುವರೆಗೆ 87 ಜನ ಮೃತಪಟ್ಟಿದ್ದಾರೆ. ಇನ್ನು, ಭಾರಿ ಮಳೆಯ ಬಳಿಕ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಜನರಿಗೆ ಶುದ್ಧವಾದ ನೀರು ಪೂರೈಕೆಯಾಗುತ್ತಿಲ್ಲ. ಪರಿಹಾರ ಕಾರ್ಯಕ್ಕಾಗಿ ಜನ ಹಾತೊರೆಯುತ್ತಿದ್ದಾರೆ. ಕೆಲವು ಗ್ರಾಮಗಳಿಗಂತೂ ಸಂಪರ್ಕವೇ ಕಡಿತಗೊಂಡಿದೆ. ಇದರಿಂದಾಗಿ ಜನ ಮತ್ತಷ್ಟು ಪರದಾಡುವಂತಾಗಿದೆ.