ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಇಂದು ವಿಧಾನಸಭೆಯಲ್ಲಿ ಮಹಾನ್ ಎಡವಟ್ಟು ಮಾಡಿಕೊಂಡಿದ್ದಾರೆ. ಇಂದು ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡನೆ (Rajasthan Budget) ಇತ್ತು. ಸದಸ್ಯರೆಲ್ಲ ಕುತೂಹಲದಿಂದ ಕಾಯುತ್ತಿದ್ದರು. ಆದರೆ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಅವರು ಕಳೆದ ವರ್ಷದ ಬಜೆಟ್ನ್ನೇ ಓದಲು ಪ್ರಾರಂಭಿಸಿ ಎಡವಟ್ಟು ಮಾಡಿಕೊಂಡರು. ಸುಮಾರು ಏಳು ನಿಮಿಷಗಳ ಕಾಲ ಅವರು ಹಳೇ ಬಜೆಟ್ನ್ನೇ ಓದಿದರು. ಅಷ್ಟಾದ ಮೇಲೆ ಕೂಡ, ತಾವು ಓದುತ್ತಿರುವುದು ಹಳೇ ಬಜೆಟ್ ಎಂದು ಅವರಿಗೆ ಅರ್ಥವಾಗಲಿಲ್ಲ. ಅಲ್ಲಿದ್ದ ಸರ್ಕಾರದ ಮುಖ್ಯ ಸಚೇತಕ ಎಚ್ಚರಿಸಿದ್ದಾರೆ. ಬಳಿಕವಷ್ಟೇ ಅಶೋಕ್ ಗೆಹ್ಲೋಟ್ ಬಜೆಟ್ ಕಾಪಿ ಓದುವುದನ್ನು ನಿಲ್ಲಿಸಿದ್ದಾರೆ.
ಹೀಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹಳೇ ಬಜೆಟ್ ಓದುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಗದ್ದಲ ಶುರು ಮಾಡಿದರು. ಸದನದ ಬಾವಿಗೆ ಇಳಿದು ಪ್ರತಿಭಟನೆಯನ್ನು ಪ್ರಾರಂಭಿಸಿದರು. ಮುಖ್ಯಮಂತ್ರಿಯಾದವರಿಗೆ ಬಜೆಟ್ ಈ ವರ್ಷದ್ದೋ, ಹಳೇ ವರ್ಷದ್ದೋ ಗೊತ್ತಿರುವುದಿಲ್ಲವಾ? ಅಶೋಕ್ ಗೆಹ್ಲೋಟ್ ಅವರು ಬಜೆಟ್ ಕಾಪಿಯನ್ನು ಪೂರ್ವಭಾವಿಯಾಗಿ ಓದಿಕೊಂಡೂ ಬಂದಿಲ್ಲ ಎಂದು ಬಿಜೆಪಿ ಸದಸ್ಯರು ಟೀಕಿಸಿದರು. ಸ್ಪೀಕರ್ ಎಷ್ಟೇ ಪ್ರಯತ್ನ ಪಟ್ಟರೂ ಅವರನ್ನು ಶಾಂತಗೊಳಿಸಲು ಸಾಧ್ಯವಾಗಲಿಲ್ಲ. ತತ್ಪರಿಣಾಮ ಬಜೆಟ್ ಅಧಿವೇಶನ 30 ನಿಮಿಷ ಮುಂದೂಡಲ್ಪಟ್ಟಿತು.
ಇದೇ ವರ್ಷ ಕೊನೆಯಲ್ಲಿ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರಕ್ಕೆ ಇದು ಕೊನೇ ಬಜೆಟ್. ಆದರೆ ಈ ಬಜೆಟ್ ಅಧಿವೇಶನದಲ್ಲಿಯೇ ಅಶೋಕ್ ಗೆಹ್ಲೋಟ್ ಟ್ರೋಲ್ ಆಗುವಂತಾಗಿದೆ. ಬಜೆಟ್ ಮಂಡನೆಗೆ ಅದರದ್ದೇ ಆದ ಗೌರವ ಇದೆ. ಆದರೆ ಅಶೋಕ್ ಗೆಹ್ಲೋಟ್ ಅವರು ಹಳೇ ಬಜೆಟ್ ಓದುವ ಮೂಲಕ ರಾಜಸ್ಥಾನ ವಿಧಾನಸಭೆಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ರಾಜೇಂದ್ರ ರಾಥೋಡೆ ಹೇಳಿದ್ದಾರೆ. ಅದರಲ್ಲೂ ಕೂಡ ಈ ಸಲದ ಬಜೆಟ್ ಮಂಡನೆಯನ್ನು ಲೈವ್ ಆಗಿ ನೋಡಲು ವ್ಯವಸ್ಥೆ ಮಾಡುವಂತೆ ಕಾಲೇಜುಗಳಿಗೆ ಹೇಳಲಾಗಿತ್ತು. ವಿದ್ಯಾರ್ಥಿಗಳಿಗೂ ಬಜೆಟ್ ಅರಿವು ಮೂಡಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ: Explosives Found: ಪ್ರಧಾನಿ ಮೋದಿ ಹತ್ಯೆಗೆ ನಡೆಯಿತಾ ಸಂಚು? ಅವರ ರಾಜಸ್ಥಾನ ಭೇಟಿಗೂ 3 ದಿನ ಮೊದಲು ಸಾವಿರ ಕೆಜಿ ಸ್ಫೋಟಕ ಪತ್ತೆ