ಜೈಪುರ: ವರ್ಷಾಂತ್ಯದಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆ (Rajasthan Election 2023) ನಡೆಯಲಿದೆ. ಕಾಂಗ್ರೆಸ್ ಆಂತರಿಕ ಬಿಕ್ಕಟ್ಟಿನ ಮಧ್ಯೆಯೂ ಈಗಾಗಲೇ ವಿದ್ಯುತ್, ಗ್ಯಾಸ್ ಸೇರಿ ಹಲವು ‘ಉಚಿತ ಭಾಗ್ಯ’ಗಳನ್ನು ನೀಡುವ ಮೂಲಕ ಗಮನ ಸೆಳೆದಿರುವ ಅಶೋಕ್ ಗೆಹ್ಲೋಟ್ (Ashok Gehlot) ಅವರು ಈಗ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಇತರೆ ಇಂದುಳಿದ ವರ್ಗಗಳಲ್ಲಿಯೇ (OBC) ಅತಿ ಹೆಚ್ಚು ಹಿಂದುಳಿದವರಿಗೆ ಶೇ.6ರಷ್ಟು ಮೀಸಲಾತಿ (OBC Reservation) ಘೋಷಿಸಿದ್ದಾರೆ. ಇದು ಚುನಾವಣೆ ದೃಷ್ಟಿಯಿಂದ ಮಾಸ್ಟರ್ ಸ್ಟ್ರೋಕ್ ಎಂದೇ ವಿಶ್ಲೇಷಿಸಲಾಗುತ್ತಿದೆ.
“ಈಗಾಗಲೇ ರಾಜ್ಯದಲ್ಲಿ ಒಬಿಸಿಗೆ ಶೇ.21ರಷ್ಟು ಮೀಸಲಾತಿ ಇದೆ. ಈಗ ಹೆಚ್ಚುವರಿಯಾಗಿ ಶೇ.6ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಇದು ಇತರೆ ಹಿಂದುಳಿದ ವರ್ಗಗಳಲ್ಲಿಯೇ ಅತಿ ಹೆಚ್ಚು ಹಿಂದುಳಿದವರಿಗೆ ಅನ್ವಯವಾಗಲಿದೆ. ಇದರಿಂದ ಅತಿ ಹೆಚ್ಚು ಹಿಂದುಳಿದವರ ಏಳಿಗೆಗೆ ಕಾರಣವಾಗಲಿದೆ. ಹಾಗಾಗಿ, ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ” ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾಹಿತಿ ನೀಡಿದರು.
ಅಶೋಕ್ ಗೆಹ್ಲೋಟ್ ಮಾಹಿತಿ
ಒಬಿಸಿ ಸಮಿತಿ ರಚನೆ
“ಒಬಿಸಿಗಳಲ್ಲೇ ಅತಿ ಹೆಚ್ಚು ಹಿಂದುಳಿದ ಸಮುದಾಯಗಳು ಯಾವವು ಎಂಬ ಕುರಿತು ಸಮೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಒಬಿಸಿ ಸಮಿತಿ ರಚಿಸಲಾಗಿದ್ದು, ನಿಗದಿತ ಸಮಯದೊಳಗೆ ಸಮಿತಿಯು ವರದಿ ಸಲ್ಲಿಸಲಿದೆ. ಸಮಿತಿ ವರದಿ ಆಧಾರದ ಮೇಲೆ ಯಾವ ಸಮುದಾಯಗಳು ಹೆಚ್ಚುವರಿ ಮೀಸಲಾತಿ ಪಡೆಯುತ್ತವೆ ಎಂಬುದನ್ನು ತೀರ್ಮಾನಿಸಲಾಗುತ್ತಿದೆ. ಈಗಾಗಲೇ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದವರು ಹೆಚ್ಚುವರಿ ಮೀಸಲಾತಿ ಕೇಳುತ್ತಿದ್ದಾರೆ. ಇದನ್ನು ಕೂಡ ಪರಿಶೀಲಿಸಲಾಗುವುದು” ಎಂದು ತಿಳಿಸಿದರು.
ಇದನ್ನೂ ಓದಿ: ರಾಜಸ್ಥಾನದಲ್ಲಿ ಅಧಿಕಾರ ಉಳಿಸಿಕೊಳ್ಳಲು ’ಫ್ರೀ’ ದಾರಿ ಹಿಡಿದ ಸಿಎಂ ಗೆಹ್ಲೋಟ್; ಸ್ವಲ್ಪ ಮಟ್ಟಿಗೆ ನಿರಾಳರಾದ ಜನ
ಚುನಾವಣೆ ರಣತಂತ್ರ
ರಾಜಸ್ಥಾನದಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ (Rajasthan Assembly Election) ನಡೆಯಲಿದೆ. ಇದಕ್ಕಾಗಿ ಕಾಂಗ್ರೆಸ್ ಇನ್ನಿಲ್ಲದ ಸಿದ್ಧತೆ ಕೈಗೊಳ್ಳುತ್ತಿದ್ದು, ಬುಧವಾರವಷ್ಟೇ (ಆಗಸ್ಟ್ 10) ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ರ‍್ಯಾಲಿ ನಡೆಸಿದ್ದಾರೆ. ಅಲ್ಲದೆ, ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಮಧ್ಯೆ ಇರುವ ಬಿಕ್ಕಟ್ಟನ್ನು ಬಗೆಹರಿಸಲು ಕೂಡ ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನಿಸುತ್ತಿದೆ. ಅತ್ತ, ಬಿಜೆಪಿಯೂ ವಿಧಾನಸಭೆ ಚುನಾವಣೆಗೆ ಸಕಲ ಸಿದ್ಧತೆ ಕೈಗೊಳ್ಳುತ್ತಿದೆ.