ಜೈಪುರ: ರಾಜಕಾರಣಿಗಳು ಇರುವುದೇ ಹಾಗೆ. ಅವರು ಯಾವಾಗ ಖುಷಿಯಿಂದ ಇರುತ್ತಾರೋ, ಯಾವಾಗ ರೇಗುತ್ತಾರೋ ಗೊತ್ತಾಗುವುದಿಲ್ಲ. ಕೆಲವೊಂದು ಸಲ ಅವರು ಅಧಿಕಾರಿಗಳ ಮೇಲೆ ರೇಗಾಡುತ್ತಾರೆ, ಇನ್ನೂ ಕೆಲವು ಬಾರಿ ಮತ ಕೊಟ್ಟು ಗೆಲ್ಲಿಸಿದ ಜನರನ್ನೇ ತೆಗಳುತ್ತಾರೆ. ಹೀಗೆ, ರಾಜಕಾರಣಿಗಳ ಸಮಚಿತ್ತವು ಆಗಾಗ ಕದಡುತ್ತದೆ ಎಂಬುದಕ್ಕೆ ನಿದರ್ಶನ ಎಂಬಂತೆ, ಮೈಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರು ಅಹಂಕಾರದ ವರ್ತನೆ ತೋರಿದ್ದಾರೆ. ಇದಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.
ರಾಜಸ್ಥಾನದ ಬರ್ಮೆರ್ ಜಿಲ್ಲೆಯಲ್ಲಿ ಕಳೆದ ಶುಕ್ರವಾರ ನಡೆದ (June 2) ಸಾರ್ವಜನಿಕ ಕಾರ್ಯಕ್ರಮದಲ್ಲಿ ಮೈಕ್ ಎಸೆಯುವ ಮೂಲಕ ಅಶೋಕ್ ಗೆಹ್ಲೋಟ್ ಸಿಟ್ಟು ಪ್ರದರ್ಶಿಸಿದ್ದಾರೆ. ರಾಜ್ಯ ಸರ್ಕಾರದ ಯೋಜನೆಗಳು ತಲುಪುತ್ತಿರುವ ಕುರಿತು ಅಶೋಕ್ ಗೆಹ್ಲೋಟ್ ಅವರು ಬರ್ಮೆರ್‌ನ ಸರ್ಕ್ಯೂಟ್ ಹೌಸ್‌ನಲ್ಲಿ ಮಹಿಳೆಯರೊಂದಿಗೆ ಸಂವಾದ ನಡೆಸುತ್ತಿದ್ದರು. ಇದೇ ವೇಳೆ ಗೆಹ್ಲೋಟ್ ಅವರು ಮಾತನಾಡುತ್ತಿದ್ದ ಮೈಕ್ ಕೆಟ್ಟಿದೆ. ಇದರಿಂದಾಗಿ ಅವರು ಮಹಿಳೆಯರೊಂದಿಗೆ ಸರಿಯಾಗಿ ಸಂವಾದ ನಡೆಸಲು ಆಗುತ್ತಿರಲಿಲ್ಲ. ಹಾಗಾಗಿ, ಅವರು ಮೈಕ್ ಎಸೆದು ಸಿಟ್ಟು ಪ್ರದರ್ಶಿಸಿದ್ದಾರೆ.
ಗೆಹ್ಲೋಟ್ ವರ್ತನೆ ಹೀಗಿತ್ತು
Ashok Gehlot gets angry and throws Mike(not working) at an official pic.twitter.com/fa3d5Ea4h1
— Hemir Desai (@hemirdesai) June 3, 2023
ಮೈಕ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಅಶೋಕ್ ಗೆಹ್ಲೋಟ್ ಅವರು ಕೆಂಡಾಮಂಡಲರಾಗಿದ್ದಾರೆ. ಮಹಿಳೆಯರ ಹಿಂದೆ ನಿಂತಿದ್ದ ಒಂದಷ್ಟು ಜನರಿಗೆ ದೂರ ಹೋಗಿ ಎಂದು ಹೇಳಿದ್ದಾರೆ. ಹಾಗೆಯೇ, “ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಎಲ್ಲಿ” ಎಂದು ಕೇಳಿದ್ದಾರೆ. ಆಗ ಅಧಿಕಾರಿಯೊಬ್ಬರು ಮತ್ತೊಂದು ಮೈಕ್ ಹಿಡಿದು ಗೆಹ್ಲೋಟ್ ಅವರಿಗೆ ಕೊಡಲು ಮುಂದಾಗುತ್ತಾರೆ. ಆಗ ಗೆಹ್ಲೋಟ್ ಅವರು, “ಎಸ್‌ಪಿ, ಜಿಲ್ಲಾಧಿಕಾರಿ ಒಂದೇ ರೀತಿ ಕಾಣುತ್ತಾರೆ” ಎಂದು ಮೈಕ್ ಎಸೆದರು. ಈ ವಿಡಿಯೊ ಈಗ ವೈರಲ್ ಆಗಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಅಧಿಕಾರ ಉಳಿಸಿಕೊಳ್ಳಲು ’ಫ್ರೀ’ ದಾರಿ ಹಿಡಿದ ಸಿಎಂ ಗೆಹ್ಲೋಟ್; ಸ್ವಲ್ಪ ಮಟ್ಟಿಗೆ ನಿರಾಳರಾದ ಜನ
ಅಶೋಕ್ ಗೆಹ್ಲೋಟ್ ಅವರು ಸಿಟ್ಟಿನಲ್ಲಿ ಮೈಕ್ ಎಸೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಶೋಕ್ ಗೆಹ್ಲೋಟ್ ಅವರು ಇಂತಹ ವರ್ತನೆ ತೋರುವುದು ಸರಿಯಲ್ಲ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ, ಮತ್ತೊಬ್ಬ ವ್ಯಕ್ತಿ ಪ್ರತಿಕ್ರಿಯಿಸಿ, “ಅಶೋಕ್ ಗೆಹ್ಲೋಟ್ ಅವರೇನೋ ಅಧಿಕಾರದ ಮದದಲ್ಲಿ ಹೀಗೆ ವರ್ತಿಸಿದ್ದಾರೆ. ನಾಳೆ ಅಧಿಕಾರ ಕಳೆದುಕೊಂಡ ತುಂಬ ಅವಮಾನವಾಗುತ್ತದೆ” ಎಂದು ಎಚ್ಚರಿಸಿದ್ದಾರೆ. ಹೀಗೆ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.