Site icon Vistara News

ಮತ್ತೊಮ್ಮೆ ರಾಹುಲ್​ ಗಾಂಧಿಯೇ ಎಐಸಿಸಿ ಅಧ್ಯಕ್ಷರಾಗಲಿ ಎಂದು ನಿರ್ಣಯ ಅಂಗೀಕರಿಸಿದ ರಾಜಸ್ಥಾನ ಕಾಂಗ್ರೆಸ್​

Rajasthan Congress passed a resolution that Rahul Gandhi should be made AICC President

ಜೈಪುರ: ಅಕ್ಟೋಬರ್​ 17ರಂದು ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ (Congress President) ನಡೆಯಲಿದೆ. ಯಾರೆಲ್ಲ ನಾಮಪತ್ರ ಸಲ್ಲಿಸಬಹುದು? ಅಧ್ಯಕ್ಷ ಸ್ಥಾನಕ್ಕೆ ಯಾರು ಸ್ಪರ್ಧಿಸಬಹುದು? ಎಂಬಿತ್ಯಾದಿ ಪ್ರಶ್ನೆಗಳು ಈಗಾಗಲೇ ಚರ್ಚೆಗೆ ಮುನ್ನೆಲೆಗೆ ಬಂದಿವೆ. ರಾಹುಲ್​ ಗಾಂಧಿಯವರನ್ನೇ ಮತ್ತೊಮ್ಮೆ ಅಧ್ಯಕ್ಷ ಗಾಧಿಯಲ್ಲಿ ಕೂರಿಸಲು ಪ್ರಯತ್ನಗಳೂ ನಡೆಯುತ್ತಿವೆ. ಕಾಂಗ್ರೆಸ್​ನ ಅನೇಕ ಹಿರಿಯ ಮುಖಂಡರು ರಾಹುಲ್​ ಗಾಂಧಿಯೇ ಮತ್ತೆ ಅಧ್ಯಕ್ಷನಾಗಲಿ ಎಂದೂ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಈ ಮಧ್ಯೆ ರಾಜಸ್ಥಾನ ಕಾಂಗ್ರೆಸ್​​ ಮತ್ತೂ ಒಂದು ಹೆಜ್ಜೆ ಮುಂದಿಟ್ಟಿದೆ. ‘ರಾಹುಲ್​ ಗಾಂಧಿಯನ್ನೇ ಮತ್ತೊಮ್ಮೆ ಕಾಂಗ್ರೆಸ್​ ಅಧ್ಯಕ್ಷನನ್ನಾಗಿ ಮಾಡಬೇಕು’ ಎಂದು ನಿರ್ಣಯವನ್ನೂ ಅಂಗೀಕರಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆ ಸಂಬಂಧ ಪ್ರತಿ ರಾಜ್ಯದಲ್ಲೂ ಪ್ರದೇಶ ಕಾಂಗ್ರೆಸ್​ ಸಮಿತಿ ಸಭೆ ನಡೆಯುತ್ತಿದೆ. ‘ಮುಂಬರುವ ಕಾಂಗ್ರೆಸ್​ ಅಧ್ಯಕ್ಷರಿಗೆ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಎಐಸಿಸಿ ಸದಸ್ಯರ ಆಯ್ಕೆ ಮಾಡಲು ಸಂಪೂರ್ಣ ಅಧಿಕಾರ ನೀಡುತ್ತೇವೆ’ ಎಂಬ ನಿರ್ಣಯಗಳನ್ನು ಈ ಸಭೆಗಳಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಆದರೆ ರಾಜಸ್ಥಾನದಲ್ಲಿ ಸಿಎಂ ಅಶೋಕ್​ ಗೆಹ್ಲೋಟ್​ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇನ್ನೊಂದು ತೀರ್ಮಾನವನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳಲಾಗಿದೆ. ‘ಎಐಸಿಸಿ ಅಧ್ಯಕ್ಷರನ್ನಾಗಿ ರಾಹುಲ್​ ಗಾಂಧಿಯವರನ್ನೇ ಆಯ್ಕೆ ಮಾಡುತ್ತೇವೆ’ ಎಂಬ ನಿರ್ಣಯವನ್ನೂ ಅಂಗೀಕರಿಸಲಾಗಿದೆ. ಈ ಬಗ್ಗೆ ರಾಜಸ್ಥಾನ ಸಚಿವ ಪಿ.ಎಸ್​. ಖಚರಿಯಾವಾಸ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪುದುಚೇರಿಯಲ್ಲೂ ಕೂಡ ಕಾಂಗ್ರೆಸ್​ ಇಂಥದ್ದೇ ನಿರ್ಣಯ ಅಂಗೀಕಾರ ಮಾಡಿದ್ದು, ‘ರಾಹುಲ್​ ಗಾಂಧಿಯೇ ಎಐಸಿಸಿಗೆ ಮತ್ತೊಮ್ಮೆ ಅಧ್ಯಕ್ಷರಾಗಬೇಕು’ ಎಂದು ಆಗ್ರಹಿಸಿದೆ. ಸೆಪ್ಟೆಂಬರ್​ 19ರಂದು ಹಿಮಾಚಲ ಪ್ರದೇಶ ಕಾಂಗ್ರೆಸ್​ ಸಭೆ ನಡೆಯಲಿದ್ದು, ಅಲ್ಲಿಯೂ ಸಹ ಇದೇ ನಿರ್ಣಯ ಪಾಸ್​ ಆಗಲಿದೆ ಎಂದು ಹೇಳಲಾಗಿದೆ. ಬೇಡವೆಂದು ತ್ಯಜಿಸಿದ ಅಧ್ಯಕ್ಷನ ಹುದ್ದೆ ಮತ್ತೆ ರಾಹುಲ್ ಗಾಂಧಿ ಪಾಲಿಗೇ ದಕ್ಕುವ ಎಲ್ಲ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: Vims Bellary | ಅವಿವೇಕಿ ಸರ್ಕಾರ, ಸಚಿವರು;‌ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಶಾಸಕ ನಾಗೇಂದ್ರ ವಾಗ್ದಾಳಿ

Exit mobile version