ರಾಜಸ್ಥಾನ ಪಿಎಫ್‌ಐ (ನಿಷೇಧಿತ ಸಂಘಟನೆ) ಕೇಸ್ಗೆ (Rajasthan PFI case)ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ ಇಂದು ಇಬ್ಬರು ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ. ಕೋಟಾದ ಮೊಹಮ್ಮದ್ ಆಶಿಫ್ ಅಲಿಯಾಸ್ ಆಸಿಫ್ ಮತ್ತು ಬರಾನ್ನ ಸಾದಿಕ್ ಸರಾಫ್ ವಿರುದ್ಧ ಸೋಮವಾರ, ಭಾರತೀಯ ದಂಡ ಸಂಹಿತೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಗಳಡಿ ಎನ್ಐಎ ವಿಶೇಷ ಕೋರ್ಟ್ನಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾಗಿ ತನಿಖಾದಳದ ವಕ್ತಾರರೊಬ್ಬರು ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಸಕ್ರಿಯವಾಗಿದ್ದ ನಿಷೇಧಿತ ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಸಂಘಟನೆಯ ಸದಸ್ಯರು, 2047ರ ಹೊತ್ತಿಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸುವ ಕಾರ್ಯಸೂಚಿಯ ಅನುಷ್ಠಾನಕ್ಕಾಗಿ ಮುಸ್ಲಿಂ ಯುವಕರನ್ನು ಹೆಚ್ಚೆಚ್ಚು ಸೆಳೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಭಾರತದಲ್ಲಿ ಸಮಾಜದ ವಿವಿಧ ಸಮುದಾಯಗಳ ನಡುವೆ ವೈರತ್ವ ಮೂಡಿಸುವ ಸಲುವಾಗಿ ಸಂಚು ಹೆಣೆಯಲು ಹೀಗೆ ಮುಸ್ಲಿಂ ಯುವಕರನ್ನು ಸೆಳೆದು, ಅವರಿಗೆ ಮಾರಕಾಸ್ತ್ರ, ಸ್ಫೋಟಕಗಳ ಬಳಕೆಯ ತರಬೇತಿ ನೀಡುತ್ತಿದ್ದಾರೆ, ಹಿಂಸಾಚಾರ ಪ್ರಚೋದಿಸುತ್ತಿದ್ದಾರೆ. ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂಬ ಆರೋಪದಡಿ 2022ರ ಸೆಪ್ಟೆಂಬರ್ 19ರಂದು ಮೊದಲ ಬಾರಿಗೆ ಎನ್ಐಎ ಕೇಸ್ ದಾಖಲು ಮಾಡಿತ್ತು.
ಇದನ್ನೂ ಓದಿ: Nettaru murder : ನೆಟ್ಟಾರು ಕೊಲೆಯಲ್ಲಿ ಸಿಕ್ಕಿಬಿದ್ದ ಪಿಎಫ್‌ಐ ಮುಖಂಡ ತುಫೈಲ್ ಪ್ರಶಾಂತ್ ಪೂಜಾರಿ ಹತ್ಯೆಯಲ್ಲೂ ಭಾಗಿ?
ತನಿಖೆ ಮುಂದುವರಿಸಿದ್ದ ಎನ್ಐಎ ಅಧಿಕಾರಿಗಳು ಆಸಿಫ್ ಮತ್ತು ಸಾದಿಕ್ ಸರಾಫ್ನನ್ನು ಬಂಧಿಸಿದ್ದರು. ಇವರಿಬ್ಬರೂ ಪಿಎಫ್ಐನಿಂದ ಸಮಗ್ರ ತರಬೇತಿ ಪಡೆದವರಾಗಿದ್ದು, ಮುಸ್ಲಿಂ ಯುವಕರ ಬ್ರೇನ್ ವಾಶ್ ಮಾಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಭಾರತದಲ್ಲಿ ಇಸ್ಲಾಂಗೆ ಅಪಾಯವಿದೆ, ಅದನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂಬ ಪ್ರಚಾರ ಮಾಡುತ್ತಿದ್ದರು ಎಂಬ ಅಂಶವನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ. ಅಂದಹಾಗೇ, ಇದೇ ರಾಜಸ್ಥಾನ ಪಿಎಫ್‌ಐ ಕೇಸ್ಗೆ ಸಂಬಂಧಪಟ್ಟಂತೆ ಕೆಲವು ದಿನಗಳ ಹಿಂದಷ್ಟೇ ಎನ್ಐಎ ರಾಜಸ್ಥಾನದ ಏಳು ಕಡೆಗಳಲ್ಲಿ ರೇಡ್ ಕೂಡ ಮಾಡಿತ್ತು.