Site icon Vistara News

ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್‌ ಕುಮಾರ್‌ ನೇಮಕ; ಮೇ 15ರಂದು ಅಧಿಕಾರ ಸ್ವೀಕಾರ

Gujarat Election

ನವದೆಹಲಿ: ದೇಶದ ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ರಾಜೀವ್‌ ಕುಮಾರ್‌ ಅವರ ಹೆಸರನ್ನು ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯ ಘೋಷಿಸಿದೆ. ಈಗ ಮುಖ್ಯ ಚುನಾವಣಾ ಆಯುಕ್ತರಾಗಿರುವ ಸುಶೀಲ್‌ ಚಂದ್ರ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ರಾಜೀವ್‌ ಕುಮಾರ್‌ ನೇಮಕಗೊಂಡಿದ್ದು, ಮೇ 15ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಂವಿಧಾನದ ಪರಿಚ್ಛೇದ 324ರ ಅನುಚ್ಛೇದ (02)ರ ಅನ್ವಯ, ರಾಷ್ಟ್ರಪತಿಯವರು ರಾಜೀವ್‌ ಕುಮಾರ್‌ರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ರಾಜೀವ್‌ ಕುಮಾರ್‌ ಅವರು 2020ರ ಸೆಪ್ಟೆಂಬರ್‌ 1ರಿಂದ ಚುನಾವಣಾ ಆಯೋಗದ ಚುನಾವಣಾ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅದಕ್ಕೂ ಮೊದಲು ಅಂದರೆ 2020ರ ಏಪ್ರಿಲ್‌ನಲ್ಲಿ ಅವರು ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿ (PESB) ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅದೇ ವರ್ಷ ಸೆಪ್ಟೆಂಬರ್‌ವರೆಗೆ PESB ಯಲ್ಲಿದ್ದು ಬಳಿಕ ಚುನಾವಣಾ ಆಯುಕ್ತರಾಗಿದ್ದರು ಈಗ ಎರಡು ವರ್ಷಗಳ ನಂತರ ಮುಖ್ಯ ಚುನಾವಣಾ ಆಯುಕ್ತರ ಸ್ಥಾನಕ್ಕೆ ಏರಿದ್ದಾರೆ. ಇವರು 1984 ರ ಬ್ಯಾಚ್‌ನ, ಬಿಹಾರ/ಜಾರ್ಖಂಡ್‌ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದು, 2020ರ ಫೆಬ್ರವರಿಯಲ್ಲಿ ಐಎಎಸ್‌ನಿಂದ ನಿವೃತ್ತಗೊಂಡಿದ್ದಾರೆ.

66 ವರ್ಷದ ರಾಜೀವ್‌ ಕುಮಾರ್‌ ಬಿಎಸ್‌ಸಿ, ಎಲ್‌ಎಲ್‌ಬಿ, ಪಿಜಿಡಿಎಂ ಪದವೀಧರರು. ಸಾರ್ವಜನಿಕ ನೀತಿ (Public Policy)ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಚಿವಾಲಯಗಳ ಸಾಮಾಜಿಕ ವಲಯ, ಪರಿಸರ ಮತ್ತು ಅರಣ್ಯ, ಮಾನವ ಸಂಪನ್ಮೂಲ, ಹಣಕಾಸು ಮತ್ತು ಬ್ಯಾಂಕಿಂಗ್‌ ಸೆಕ್ಟರ್‌ಗಳಲ್ಲಿ 37ವರ್ಷಗಳ ಕೆಲಸದ ಅನುಭವ ಹೊಂದಿದ್ದಾರೆ.

ಆರ್‌ಬಿಐನ ಕೇಂದ್ರ ಮಂಡಳಿ, ಎಸ್‌ಬಿಐ, ನಬಾರ್ಡ್‌ಗಳ ನಿರ್ದೇಶಕರಾಗಿ, ಆರ್ಥಿಕ ಗುಪ್ತಚರ ಮಂಡಳಿ (EIC), ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ (FSDC), ಬ್ಯಾಂಕ್‌ ಬೋರ್ಡ್‌ ಬ್ಯೂರೋ (BBB), ಫೈನಾನ್ಸಿಯಲ್‌ ಸೆಕ್ಟರ್‌ ರೆಗ್ಯೂಲೇಟರಿ ಅಪಾಯಂಟ್‌ಮೆಂಟ್‌ ಸರ್ಚ್‌ ಕಮಿಟಿ (FSRASC) ಮತ್ತು ನಾಗರಿಕ ಸೇವಾ ಮಂಡಳಿಗಳು, ಸಮಿತಿಗಳ ಸದಸ್ಯರಾಗಿಯೂ ಕಾರ್ಯನಿವಹಿಸಿದ್ದಾರೆ.

ಇದನ್ನೂ ಓದಿ | ರಾಜ್ಯದಲ್ಲಿ ಯಾವುದೇ ಚುನಾವಣೆ ಎದುರಿಸಲು ಬಿಜೆಪಿ ಸಂಪೂರ್ಣ ಸಿದ್ಧ: ನಳಿನ್ ಕುಮಾರ್ ಕಟೀಲ್

Exit mobile version