Site icon Vistara News

ರಾಜೀವ್‌ ಹತ್ಯೆ: ಬ್ಯಾಟರಿ ತಂದುಕೊಟ್ಟಿದ್ದ ಪೆರಾರಿವಾಲನ್‌ 32 ವರ್ಷ ಬಳಿಕ ಬಂಧಮುಕ್ತ

ರಾಜೀವ್‌ ಹತ್ಯೆ, ಪೆರಾರಿವಾಲನ್‌

ಹೊಸದಿಲ್ಲಿ: ದೇಶವೇ ಬೆಚ್ಚಿ ಬಿದ್ದ ರಾಜೀವ್‌ ಗಾಂಧಿ ಹತ್ಯಾ ಪ್ರಕರಣದಲ್ಲಿ ಭಾಗಿಯಾಗಿದ್ದ ಅಪರಾಧಿ ಎ..ಜಿ. ಪೆರಾರಿವಾಲನ್‌ 32 ವರ್ಷಗಳ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಸುಪ್ರೀಂಕೋರ್ಟ್‌ ಬುಧವಾರ ಈ ಮಹತ್ವದ ತೀರ್ಪನ್ನು ನೀಡಿದ್ದು, ಬಂಧಮುಕ್ತ ಪೆರಾರಿವಾಲನ್‌ನನ್ನು ಆತನ ತಾಯಿ ಮತ್ತು ಬಂಧುಗಳು ಭಾವುಕ ಕಣ್ಣೀರಿನಿಂದ ಎದುರ್ಗೊಂಡರು. ರಾಜೀವ್‌ ಹತ್ಯೆಯಲ್ಲಿ ಭಾಗಿಯಾಗಿದ್ದವರ ಪೈಕಿ ಶಿಕ್ಷೆಗೆ ಒಳಗಾದ ಏಳು ಮಂದಿಯಲ್ಲಿ ಪೆರಾರಿವಾಲನ್‌ ಒಬ್ಬ.

1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ನಡೆದ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಆಗ ರಾಜೀವ್‌ ಗಾಂಧಿ ಅವರ ಹತ್ಯೆ ನಡೆದಿತ್ತು. ಎಲ್‌ಟಿಟಿಇ ಧನು ಎಂಬ ಆತ್ಮಹತ್ಯಾ ಬಾಂಬರ್‌ನ್ನು ಬಳಸಿ ಈ ಹತ್ಯೆ ಮಾಡಿಸಿತ್ತು. ಇದರಲ್ಲಿ ಒಟ್ಟು 14 ಮಂದಿ ಪ್ರಾಣ ಕಳೆದುಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಅಂತಿಮವಾಗಿ ಏಳು ಮಂದಿಗೆ ಶಿಕ್ಷೆಯಾಗಿತ್ತು. ಮುರುಗನ್‌ ಅಲಿಯಾಸ್‌ ಶ್ರೀಹರನ್‌, ಅವನ ಪತ್ನಿ ನಳಿನಿ, ಶ್ರೀಲಂಕಾ ಪ್ರಜೆಗಳಾದ ಸಂತಾನ್‌ ಅಲಿಯಾಸ್‌ ಟಿ. ಸುತ್ತೆಂತಿರಾರಾಜಾ, ರಾಬರ್ಟ್‌ ಪಿಯೂಸ್‌, ಅವನ ಸಹೋದರ ಜಯಕುಮಾರ್‌, ರವಿಚಂದ್ರನ್‌ ಹಾಗೂ ಭಾರತದ ಪ್ರಜೆಯಾಗಿರುವ ಎ.ಜಿ. ಪೆರಾರಿವಾಲನ್‌.

ಪೆರಾರಿವಾಲನ್‌ ಪಾತ್ರವೇನು?
ತಮಿಳುನಾಡಿನ ಜೋಳರಪೇಟೆ ಮೂಲದ ಪೆರಾರಿವಾಲನ್‌ಗೆ ರಾಜೀವ್‌ ಹತ್ಯೆ ನಡೆದಾಗ 19 ವರ್ಷ. ಈಗ ಅವನಿಗೆ 50 ವರ್ಷ. ಹತ್ಯೆಯ ವೇಳೆ ಆತ್ಮಹತ್ಯಾ ಬಾಂಬರ್‌ ಧನು ಧರಿಸಿದ್ದ ಬೆಲ್ಟ್‌ ಬಾಂಬ್‌ಗೆ ಬಳಸಿದ್ದ ಒಂಬತ್ತು ವೋಲ್ಟಿನ ಗೋಲ್ಡನ್‌ ಅವರ್‌ ಬ್ಯಾಟರಿಗಳನ್ನು ತಂದು ಕೊಟ್ಟಿದ್ದು ಪೆರಾರಿವಾಲನ್‌ ಎನ್ನುವುದು ಅವನ ಮೇಲಿರುವ ಆರೋಪ. ತಾನು ಬ್ಯಾಟರಿ ತಂದು ಕೊಟ್ಟಿದ್ದು ನಿಜ. ಆದರೆ, ಅದನ್ನು ಈ ದುಷ್ಕ್ರೃತ್ಯಕ್ಕೆ ಬಳಸುತ್ತಾರೆ ಎನ್ನುವುದು ತಿಳಿದಿರಲಿಲ್ಲ ಎನ್ನುವುದು ಪೆರಾರಿವಾಲನ್‌ ವಾದವಾಗಿತ್ತು.

ಕಾಶ್ಮೀರಿ ಪಂಡಿತ್‌ ರಾಹುಲ್‌ ಭಟ್‌ ಹತ್ಯೆ; ಎಲ್ಲೆಡೆ ಪ್ರತಿಭಟನೆ, ಬಿಜೆಪಿ ವಿರುದ್ಧ ಆಕ್ರೋಶ

ವಿಶೇಷ ತನಿಖಾ ತಂಡ (ಎಸ್‌ಐಟಿ) ಆರಂಭದಲ್ಲಿ 41 ಮಂದಿಯ ಚೆನ್ನೈನ ಟಾಡಾ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿತ್ತು. ವಿಚಾರಣೆ ನಡೆಸಿದ ಕೋರ್ಟ್‌ 1998ರಲ್ಲಿ ನಳಿನಿ, ಪೆರಾರಿವಾಲನ್‌ ಸೇರಿ 26 ಮಂದಿಗೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಇವರೆಲ್ಲರ ಮೇಲ್ಮನವಿಯನ್ನು ಸ್ವೀಕರಿಸಿದ ಸುಪ್ರೀಂಕೋರ್ಟ್‌ ನಳಿನಿ, ಮುರುಗನ್‌, ಸಂತಾನಂ ಮತ್ತು ಪೆರಾರಿವಾಲನ್‌ ಅವರ ಮರಣ ದಂಡನೆಯನ್ನು 1999ರಲ್ಲಿ ಎತ್ತಿ ಹಿಡಿಯಿತು. ಈ ನಡುವೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಮನವಿ ಹಾಗೂ ತಮಿಳುನಾಡು ರಾಜ್ಯ ಸರಕಾರದ ಶಿಫಾರಸಿನ ಮೇರೆಗೆ ಸುಪ್ರೀಂಕೋರ್ಟ್‌ 2000ರ ಏಪ್ರಿಲ್‌ನಲ್ಲಿ ನಳಿನಿಯ ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತು. ಪೆರಾರಿವಾಲನ್‌ ಮತ್ತು ಇತರರು 2001ರಲ್ಲಿ ರಾಷ್ಟ್ರಪತಿಗಳಿಗೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದರು. 11 ವರ್ಷಗಳ ಬಳಿಕ ಬಳಿಕ ಆಗ ರಾಷ್ಟ್ರಪತಿ ಆಗಿದ್ದ ಪ್ರತಿಭಾ ಪಾಟೀಲ್‌ ಮನವಿಯನ್ನು ತಿರಸ್ಕರಿಸಿದರು.

ಬಿಡುಗಡೆ ಮಾಡಿದ್ದಕ್ಕೆ ಕಾರಣಗಳು
ಕ್ಷಮಾದಾನದ ಅರ್ಜಿಯನ್ನು ವಿಲೇವಾರಿ ಮಾಡಲು 11 ವರ್ಷ ವಿಳಂಬ ಮಾಡಿದ್ದನ್ನು ಪರಿಗಣಿಸಿ ಸುಪ್ರೀಂಕೋರ್ಟ್‌ 2014ರಲ್ಲೇ ಪೆರಾರಿವಾಲನ್‌ನ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು. 2015ರಲ್ಲಿ ಪೆರಾರಿವಾಲನ್‌ ತಮಿಳುನಾಡು ರಾಜ್ಯಪಾಲರ ಮುಂದೆ ಮತ್ತೊಮ್ಮೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ. ಆದರೆ ಇದಕ್ಕೆ ಉತ್ತರವೇ ಬರಲಿಲ್ಲ. ಸುಪ್ರೀಂಕೋರ್ಟ್‌ ಕೂಡಾ ಕ್ಷಮಾದಾನದ ಅರ್ಜಿಯ ಬಗ್ಗೆ ಒಂದು ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಿತ್ತು.

ಇವೆಲ್ಲವನ್ನೂ ಪರಿಗಣಿಸಿ ಸುಪ್ರೀಂಕೋರ್ಟ್‌ ಪೆರಾರಿವಾಲನ್‌ ಬಿಡುಗಡೆಗೆ ನಿರ್ಧರಿಸಿದೆ. ಪೆರಾರಿವಾಲನ್‌ ಈಗಾಗಲೇ 32 ವರ್ಷ ಜೈಲಿನಲ್ಲಿ ಕಳೆದಿದ್ದಾನೆ ಎಂಬುದನ್ನು ಪರಿಗಣಿಸಿ ಭಾರತೀಯ ಸಂವಿಧಾನದ 142ನೇ ವಿಧಿಯಡಿ ಬರುವ ವಿಶೇಷ ಅಧಿಕಾರವನ್ನು ಬಳಸಿ ಬಿಡುಗಡೆಗೆ ಆದೇಶ ನೀಡಿದೆ.

Exit mobile version