ನವ ದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ಡಿಸೆಂಬರ್ 9ರಂದು ನಡೆದ ಭಾರತ-ಚೀನಾ ಯೋಧರ ಘರ್ಷಣೆಯಲ್ಲಿ ಭಾರತೀಯ ಸೇನೆಯ ಯಾವ ಯೋಧರೂ ಜೀವ ಕಳೆದುಕೊಂಡಿಲ್ಲ ಮತ್ತು ಗಂಭೀರ ಗಾಯಗೊಂಡಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಲೋಕಸಭೆಯಲ್ಲಿ ಹೇಳಿದರು. ತವಾಂಗ್ನಲ್ಲಿ ಈಗಿರುವ ಸೇನಾ ಯಥಾಸ್ಥಿತಿಯನ್ನು ಬದಲಿಸಲು ಚೀನಾ ಸೈನಿಕರು ಪ್ರಯತ್ನಪಟ್ಟರು. ಈ ವೇಳೆ ಅವರು ಭಾರತದ ಭೂಪ್ರದೇಶ ಅತಿಕ್ರಮಣ ಮಾಡದಂತೆ ಭಾರತೀಯ ಸೇನಾ ಯೋಧರು ತಡೆದಿದ್ದಾರೆ ಮತ್ತು ಚೀನಿ ಸೈನಿಕರನ್ನು ಅವರ ಸ್ವಸ್ಥಾನಕ್ಕೆ ಹಿಮ್ಮೆಟ್ಟಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಗಡಿಭಾಗಗಲ್ಲಿ ಯಾವುದೇ ನೆರೆರಾಷ್ಟ್ರಗಳು ಅತಿಕ್ರಮಣ ಮಾಡಲು ಬಂದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ನಮ್ಮ ಯೋಧರು ಸದಾ ಸನ್ನದ್ಧರಾಗಿರುತ್ತಾರೆ. ಡಿ.9ರಂದೂ ಕೂಡ ಭಾರತೀಯ ಸೇನಾ ಕಮಾಂಡರ್ಗಳು ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡಿದ್ದಾರೆ. ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿ ಸಿಬ್ಬಂದಿಯನ್ನು ಹಿಮ್ಮೆಟ್ಟಿಸಿದ್ದಾರೆ. ಈ ವೇಳೆ ಎರಡೂ ಸೇನೆಗಳ ನಡುವೆ ಪರಸ್ಪರ ಹೊಡೆದಾಟ, ಕಾದಾಟ ನಡೆದಿದೆ. ಭಾರತ-ಚೀನಾ ಎರಡೂ ಕಡೆಯ ಸೈನಿಕರೂ ಗಾಯಗೊಂಡಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಈ ಘಟನೆ ನಡೆದ ಡಿ.11ರಂದು ಭಾರತೀಯ ಸೇನೆಯ ಸ್ಥಳೀಯ ಕಮಾಂಡರ್ ಮತ್ತು ಚೀನಾ ಸೇನಾ ಕಮಾಂಡರ್ ಸಭೆ ನಡೆಸಿದ್ದಾರೆ. ಸಂಘರ್ಷದ ಬಗ್ಗೆ ಸಮಗ್ರ ಚರ್ಚೆ ಮಾಡಿದ್ದಾರೆ. ಆದರೆ ಈ ವೇಳೆ ಚೀನಾ ಇದ್ಯಾವುದನ್ನೂ ಒಪ್ಪಿಕೊಂಡಿಲ್ಲ. ‘ನಮ್ಮ ಸೈನಿಕರು ಗಡಿ ನಿಯಮ ಉಲ್ಲಂಘಿಸಿಲ್ಲ. ಭಾರತೀಯ ಭೂಭಾಗ ಅತಿಕ್ರಮಣಕ್ಕೆ ಮುಂದಾಗಿಲ್ಲ. ಭಾರತೀಯ ಸೈನಿಕರ ಜತೆ ಹೊಡೆದಾಟಕ್ಕೆ ಹೋಗಿಲ್ಲ ಎಂದು ಚೀನಾ ಹೇಳಿದೆ. ‘ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡುವಂತೆ ಚೀನಾಕ್ಕೆ ಮಿಲಿಟರಿ ಮಟ್ಟದಲ್ಲಿ ಸಂದೇಶ ನೀಡಲಾಗಿದೆ. ಈ ವಿಷಯವನ್ನು ಚೀನಾದೊಂದಿಗೆ ರಾಜತಾಂತ್ರಿಕ ಮಾರ್ಗದಲ್ಲೂ ಚರ್ಚೆ ಮಾಡಲಾಗುತ್ತದೆ’ ಎಂದು ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ತಿಳಿಸಿದರು.
‘ನಮ್ಮ ಭೂಭಾಗಗಳನ್ನು ರಕ್ಷಿಸಲು ಭಾರತೀಯ ಸೇನೆ ಸದಾ ಸಿದ್ಧವಾಗಿದೆ. ನಮ್ಮ ಪ್ರಾದೇಶಿಕತೆಯ ಸಮಗ್ರತೆಗೆ ಯಾವುದೇ ಧಕ್ಕೆಯಾಗದಂತೆ ಅದು ಕಾಯುತ್ತಿದೆ. ನಾವೆಲ್ಲರೂ ಸೇರಿ ನಮ್ಮ ಸೈನಿಕರ ಆತ್ಮವಿಶ್ವಾಸ ಇಮ್ಮಡಿಗೊಳಿಸೋಣ. ಅವರ ಪ್ರಯತ್ನವನ್ನು ಗೌರವಿಸಿ, ಬೆಂಬಲಿಸೋಣ ಎಂದು ರಕ್ಷಣಾ ಸಚಿವರು ಲೋಕಸಭೆಯಲ್ಲಿ ಪ್ರತಿಪಕ್ಷಗಳ ಬಳಿ ಕೇಳಿಕೊಂಡರು.
ಇದನ್ನೂ ಓದಿ:ಭಾರತ-ಚೀನಾ ಗಡಿ ಸಂಘರ್ಷ; ಸಂಸತ್ ಅಧಿವೇಶನದ ಉಭಯ ಸದನಗಳಲ್ಲಿ ಇಂದು ಸಚಿವ ರಾಜನಾಥ್ ಸಿಂಗ್ರಿಂದ ಮಾಹಿತಿ