ರಾಜೌರಿ: ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ (Rajouri encounter) ಹತರಾದ ಯೋಧರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ರಾಜೌರಿಯ ಕಂಡಿ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಭಾರತೀಯ ಸೇನೆ ಮತ್ತು ಸಿಆರ್ಪಿಎಫ್ ಸಿಬ್ಬಂದಿ ಜಂಟಿಯಾಗಿ ಅಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.. ಇತ್ತೀಚೆಗೆ ಪೂಂಚ್ನಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದವರೇ ಇಲ್ಲಿ ಅಡಗಿರುವ ಉಗ್ರರು ಎಂಬ ಅನುಮಾನ ವ್ಯಕ್ತವಾಗಿತ್ತು. ಹೀಗಾಗಿ ಭದ್ರತಾ ಪಡೆಗಳು ಆ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿದಿದ್ದರು. ಆದರೆ ಉಗ್ರರು ತಾವು ಒಂದು ಗುಹೆಯಂಥ ಸುರಕ್ಷಿತವಾದ ಜಾಗದಲ್ಲಿ ಕುಳಿತು, ಯೋಧರಿರುವ ಕಡೆಗೆಲ್ಲ ಸ್ಫೋಟಕಗಳನ್ನು ಎಸೆದಿದ್ದರು. ಇದರಲ್ಲಿ ಇಬ್ಬರು ಯೋಧರು ಮೃತಪಟ್ಟು, ನಾಲ್ವರಿಗೆ ಗಾಯವಾಗಿತ್ತು. ಹೀಗೆ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮೂವರು ಮೃತಪಟ್ಟಿದ್ದಾರೆ. ಒಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿ ವಿವಿಧ ಭಾಗಗಳಲ್ಲಿ ಉಗ್ರರ ವಿರುದ್ಧ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬುಧವಾರ ಕುಪ್ವಾರಾದಲ್ಲಿ ಇಬ್ಬರು ಉಗ್ರರನ್ನು, ಗುರುವಾರ ಬಾರಾಮುಲ್ಲಾದಲ್ಲಿ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಇಂದು ರಾಜೌರಿಯಲ್ಲೂ ಮುಂಜಾನೆಯಿಂದಲೇ ಎನ್ಕೌಂಟರ್ ಶುರುವಾಗಿತ್ತು. ಈ ಭಾಗದಲ್ಲಿ ಎರಡು-ಮೂರು ಉಗ್ರರು ಇದ್ದಾರೆ ಎಂದು ವರದಿಯಾಗಿದೆ. ಸದ್ಯ ರಾಜೌರಿ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದೆ.
ಇದನ್ನೂ ಓದಿ: ರಾಜೌರಿಯಲ್ಲಿ ಗುಹೆಯಲ್ಲಿ ಕುಳಿತು ಸ್ಫೋಟಕ ಎಸೆದ ಉಗ್ರರು; ಇಬ್ಬರು ಯೋಧರ ಸಾವು, ನಾಲ್ವರಿಗೆ ಗಾಯ
ರಾಜೌರಿ ಮೊದಲಿನಿಂದಲೂ ಉಗ್ರ ಪೀಡಿತ ಪ್ರದೇಶ. ಪದೇಪದೆ ಇಲ್ಲಿ ಭಯೋತ್ಪಾದಕರ ದಾಳಿ ಆಗುತ್ತಿರುತ್ತದೆ. ಅವರ ವಿರುದ್ಧದ ಕಾರ್ಯಾಚರಣೆ ಸದಾ ನಡೆಯುತ್ತಿರುತ್ತದೆ. ಇತ್ತೀಚೆಗೆ ರಾಜೌರಿ-ಪೂಂಚ್ ರಸ್ತೆಯಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಅದರಲ್ಲೂ ಕೂಡ ರಾಷ್ಟ್ರೀಯ ರೈಫಲ್ಸ್ ಘಟಕದ ಐವರು ಯೋಧರು ಮೃತಪಟ್ಟಿದ್ದರು. ಪೂಂಚ್ನಲ್ಲಿ ಹೊಂಚು ಹಾಕಿ ದಾಳಿ ನಡೆಸಿದ್ದು ಲಷ್ಕರೆ ತೊಯ್ಬಾ ಸಂಘಟನೆಯ ಸುಮಾರು 7 ಉಗ್ರರು ಎಂದು ಖಚಿತವಾಗಿದೆ.