Site icon Vistara News

ಪ್ರಧಾನಿ ನೂತನ ನಿವಾಸಕ್ಕೆ ಕರ್ತವ್ಯ ಭ್ರಷ್ಟರ ಮಠ ಎಂದು ಹೆಸರಿಡಿ; ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ವ್ಯಂಗ್ಯ

TMC Leader

ನವ ದೆಹಲಿ: ಭಾರತದ ಪ್ರಮುಖ ಸ್ಥಳಗಳಿಗೆ ಬ್ರಿಟಿಷರ ಕಾಲದಲ್ಲಿ ಇಡಲಾದ ಎಲ್ಲ ಹೆಸರುಗಳನ್ನೂ ಬದಲಾಯಿಸುತ್ತೇವೆ ಎಂದು ಈ ಬಾರಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಅದರಂತೆ ಇತ್ತೀಚೆಗಷ್ಟೇ ಭಾರತೀಯ ನೌಕಾಪಡೆಯ ಧ್ವಜವನ್ನು ಕೂಡ ಬದಲಿಸಿದೆ. ಹಾಗೇ, ಈಗ ದೆಹಲಿಯಲ್ಲಿರುವ ರಾಜಪಥ ಮತ್ತು ನೂತನ ಸಂಸತ್ತು ನಿರ್ಮಾಣವಾಗುತ್ತಿರುವ ಸೆಂಟ್ರಲ್​ ವಿಸ್ಟಾ ಪ್ರದೇಶಕ್ಕೆ ಕರ್ತವ್ಯ ಪಥ ಎಂದು ನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದ್ದರೂ, ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಕೇಂದ್ರ ಸರ್ಕಾರ ರಾಜಪಥದ ಹೆಸರನ್ನು ಬದಲಿಸಲು (Rajpath Name change) ಮುಂದಾಗಿದ್ದನ್ನು ತೃಣಮೂಲ ಕಾಂಗ್ರೆಸ್​ ಸಂಸದೆ, ಮಹುವಾ ಮೊಯಿತ್ರಾ (Mahua Moitra) ಟೀಕಿಸಿದ್ದಾರೆ.

ಇತ್ತೀಚೆಗೆ ಸದಾ ಒಂದಿಲ್ಲೊಂದು ವಿವಾದ ಹುಟ್ಟುಹಾಕುತ್ತಿರುವ ಮಹುವಾ ಮೊಯಿತ್ರಾ ಇದೀಗ ಪ್ರಧಾನಮಂತ್ರಿಯನ್ನು ಟೀಕಿಸಿದ್ದಾರೆ. ‘ರಾಜಪಥಕ್ಕೆ ಕರ್ತವ್ಯ ಪಥ ಎಂದು ಹೆಸರಿಡುತ್ತಾರೆ ಎಂದಾದರೆ, ನೂತನವಾಗಿ ನಿರ್ಮಾಣವಾಗುವ ಪ್ರಧಾನಿ ನಿವಾಸಕ್ಕೆ ‘ಕರ್ತವ್ಯ ಭ್ರಷ್ಟರ ಮಠ (Kinkartavyavimudh Math)’ ಎಂದು ನಾಮಕರಣ ಮಾಡಲಿ’ ಎಂದು ಟ್ವೀಟ್​ ಮಾಡಿದ್ದಾರೆ. ಅಂದರೆ ಆಡಳಿತದಲ್ಲಿ ಇರುವವರು ತಾವು ಮಾಡಬೇಕಾದ ಕೆಲಸ ಬಿಟ್ಟು, ಬೇರೆಯದ್ದನ್ನೆಲ್ಲ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.

ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದಾಗಿನಿಂದಲೂ ಹಲವು ಪ್ರದೇಶಗಳ ಹೆಸರು ಬದಲಾವಣೆಯಾಗಿದೆ. ಈಗ ರಾಜಪಥದ ಹೆಸರನ್ನು ಬದಲಿಸುವ ಸಂಬಂಧ ಸೆಪ್ಟೆಂಬರ್​ 7ರಂದು ನವ ದೆಹಲಿ ಮುನ್ಸಿಪಲ್​ ಸಮಿತಿ ಸಭೆ ನಡೆಯಲಿದ್ದು, ಅದಾದ ಬಳಿಕ ಅಧಿಕೃತ ಘೋಷಣೆಯಾಗಲಿದೆ ಎನ್ನಲಾಗಿದೆ. ನೇತಾಜಿ ಸುಭಾಷ್​ ಚಂದ್ರ ಭೋಸ್​ ಪ್ರತಿಮೆ ಇದ್ದಲ್ಲಿಂದ, ರಾಷ್ಟ್ರಪತಿ ಭವನದವರೆಗಿನ ಸಂಪೂರ್ಣ ಪ್ರದೇಶ ಕರ್ತವ್ಯ ಪಥ ಎಂದು ಬದಲಾಗಲಿದೆ.

ಇದನ್ನೂ ಓದಿ: Rajpath | ಬ್ರಿಟಿಷರ ಕಾಲದ ಹೆಸರಿಗೆ ವಿದಾಯ, ರಾಜಪಥದ ಹೆಸರು ಬದಲಿಸಲು ತೀರ್ಮಾನ, ಏನದು ಹೊಸ ಹೆಸರು?

Exit mobile version