Site icon Vistara News

100ಕೋಟಿಗೆ ರಾಜ್ಯಸಭೆ, ರಾಜ್ಯಪಾಲ ಹುದ್ದೆ ಆಮಿಷ; ಕರ್ನಾಟಕದವನೂ ಸೇರಿ ನಾಲ್ವರನ್ನು ಬಂಧಿಸಿದ ಸಿಬಿಐ

CBI

ನವ ದೆಹಲಿ: ರಾಜ್ಯ ಸಭಾ ಸ್ಥಾನ ಕೊಡಿಸುತ್ತೇವೆ ಎಂದು ಹೇಳಿ 100 ಕೋಟಿ ರೂಪಾಯಿಯವರೆಗೂ (Rajya Sabha seats For 100 Crore) ಲಂಚ ಪಡೆಯುತ್ತಿದ್ದ ವಂಚಕರ ಜಾಲವನ್ನು ಸಿಬಿಐ ಭೇದಿಸಿದೆ. ಡೀಲಿಂಗ್‌ಗೆ ಸಂಬಂಧಪಟ್ಟು ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಈ ದಂಧೆಯಲ್ಲಿ ಇನ್ನೂ ಹೆಚ್ಚಿನ ಜನರು ಭಾಗಿಯಾಗಿರುವ ಶಂಕೆಯೂ ಇದೆ. ಇವರು ಬರೀ ರಾಜ್ಯಸಭೆ ಸ್ಥಾನಕ್ಕಷ್ಟೇ ಅಲ್ಲ, ರಾಜ್ಯಪಾಲ ಹುದ್ದೆ ಮತ್ತು ಸರ್ಕಾರದಲ್ಲಿ ವಿವಿಧ ಪ್ರಮುಖ ಆಡಳಿತಾತ್ಮಕ ಹುದ್ದೆ ನೀಡಿಸುವ ಆಮಿಷ ಒಡ್ಡುತ್ತಿದ್ದರು ಎಂಬ ಮಾಹಿತಿಯೂ ಸಿಕ್ಕಿದೆ.

ರಾಜ್ಯಸಭೆ ಸೀಟ್‌, ರಾಜ್ಯಪಾಲ ಹುದ್ದೆ ಕೊಡಿಸುವ ನೆಪದಲ್ಲಿ ನೂರಾರು ಕೋಟಿ ರೂಪಾಯಿ ಮೊತ್ತದ ಡೀಲಿಂಗ್‌ ನಡೆಯುತ್ತಿದೆ ಎಂಬ ಸುಳಿವು ಪಡೆದಿದ್ದ ಸಿಬಿಐ ಕಳೆದ ಕೆಲವು ವಾರಗಳಿಂದಲೂ ತೀವ್ರ ತನಿಖೆ ನಡೆಸುತ್ತಿತ್ತು. ಶಂಕಿತರ ಫೋನ್‌ ಟ್ರೇಸ್‌ ಮಾಡಿತ್ತು. ಇಂಟರ್‌ಸೆಪ್ಟ್‌ ಮೂಲಕ ಕರೆಗಳನ್ನು ಆಲಿಸುತ್ತಿತ್ತು. ಸದ್ಯ ಮಹಾರಾಷ್ಟ್ರದ ನಿವಾಸಿ ಕರ್ಮಲಾಕರ್ ಪ್ರೇಮಕುಮಾರ್ ಬಂಡಗಾರ್, ಕರ್ನಾಟಕದ ರವೀದ್ರ ವಿಠ್ಠಲ ನಾಯ್ಕ್‌, ದೆಹಲಿಯ ಮಹೇಂದ್ರ ಪಾಲ್‌ ಅರೋರಾ ಮತ್ತು ಅಭಿಷೇಕ್‌ ಬೂರಾ ಎಂಬುವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಇವರೆಲ್ಲ ವಂಚನೆಯನ್ನೇ ವೃತ್ತಿ ಮಾಡಿಕೊಂಡಿದ್ದರು. ರಾಜ್ಯಸಭೆಗೆ ಖಂಡಿತ ಸೀಟ್‌ ಕೊಡಿಸುತ್ತೇವೆ. ರಾಜ್ಯಪಾಲರ ಹುದ್ದೆ ನಿಮಗೇ ಸಿಗುವಂತೆ ವ್ಯವಸ್ಥೆ ಮಾಡುತ್ತೇವೆ. ಅದಾಗದಿದ್ದರೆ ಸರ್ಕಾರ ಆಯಕಟ್ಟಿನ ಸಂಸ್ಥೆಗಳು, ಇಲಾಖೆಗಳಲ್ಲಿ ಮುಖ್ಯವಾದ ಹುದ್ದೆ ಕೊಡಿಸುತ್ತೇವೆ ಎಂದು ಜನರಿಗೆ ಆಮಿಷವೊಡುತ್ತಿದ್ದರು. ಕೋಟ್ಯಂತರ ರೂಪಾಯಿ ಹಣ ಬೇಡಿಕೆ ಇಡುತ್ತಿದ್ದರು. ಈ ದಂಧೆಯಲ್ಲಿ ಅವರು 100 ಕೋಟಿ ರೂಪಾಯಿಗಳಷ್ಟು ವಂಚಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಸಿಬಿಐ ಬರೀ ಈ ನಾಲ್ವರಷ್ಟೇ ಅಲ್ಲ, ಇನ್ನೂ ಕೆಲವರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ಅದರಲ್ಲಿ ಮುಖ್ಯವಾಗಿ ಮೊಹಮ್ಮದ್‌ ಅಲಾಜ್‌ ಖಾನ್‌ ಎಂಬ ಹೆಸರೂ ಸೇರಿದೆ. ಇವರೆಲ್ಲ ತಮ್ಮ ಬಳಿ ಬರುವ ಜನರಲ್ಲಿ ನಂಬಿಕೆ ಹುಟ್ಟಿಸಲು ತಂತ್ರ ಹೆಣೆಯುತ್ತಿದ್ದರು. ರಾಜಕೀಯ ದೊಡ್ಡದೊಡ್ಡ ನಾಯಕರ, ಮುಖ್ಯಸ್ಥರ ಪರಿಚಯ ತಮಗೆ ಇದೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದರು. ಇದೀಗ ಬಂಧಿತನಾಗಿರುವ ಅಭಿಷೇಕ್‌ ಬೂರಾ ಇಲ್ಲಿ ಮಧ್ಯವರ್ತಿಯಾಗಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ. ಅದರಲ್ಲೂ ಕರ್ಮಲಾಕರ್ ಪ್ರೇಮಕುಮಾರ್ ಬಂಡಗಾರ್ ತಾನೊಬ್ಬ ಸಿಬಿಐನ ಪ್ರಭಾವಿ ಅಧಿಕಾರಿಯಂತೆ ಸೋಗು ಹಾಕುತ್ತಿದ್ದ. ಹೀಗೊಂದು ವಂಚನೆ ನಡೆಯುತ್ತಿರುವ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ನಡೆಯುತ್ತಿದ್ದ ತನಿಖೆಯನ್ನು ಸ್ಥಗಿತಗೊಳಿಸುವಲ್ಲೂ ಇವನ ಪಾತ್ರವಿದೆ ಎಂದೂ ಸಿಬಿಐ ಹೇಳಿದೆ ಎನ್ನಲಾಗಿದೆ.

ಇದನ್ನೂ ಓದಿ: Honeytrap | ಬೆತ್ತಲೆ ವಿಡಿಯೋ ಕಾಲ್‌ ರೆಕಾರ್ಡ್‌, ಸಿಬಿಐ ಹೆಸರಲ್ಲಿ ಯುವಕನಿಂದ ಲಕ್ಷಾಂತರ ರೂ. ವಸೂಲಿ

Exit mobile version