ಲಖನೌ: ರಕ್ಷಾ ಬಂಧನ ಹಬ್ಬದ ನಿಮಿತ್ತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ಮಹಿಳೆಯರಿಗಾಗಿ ಒಂದು ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ಈ ಗಿಫ್ಟ್ನ ಅವಧಿ 48ಗಂಟೆಗಳು ಎಂದೂ ಹೇಳಿದ್ದಾರೆ. ಆಗಸ್ಟ್ 11ರಂದು ರಾಕಿ ಹಬ್ಬ ನಡೆಯಲಿದ್ದು, ಅದರ ನಿಮಿತ್ತ ಎರಡು ದಿನಗಳ ಕಾಲ ರಾಜ್ಯದ ಎಲ್ಲ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಸಂಚಾರ ಮಾಡಬಹುದು. ಇದು ಆಜಾದಿ ಕಾ ಅಮೃತ್ ಮಹೋತ್ಸವದ ಉಪಕ್ರಮ ಎಂದು ಯೋಗಿ ಟ್ವೀಟ್ ಮಾಡಿದ್ದಾರೆ. ಅಂದಹಾಗೇ, ಆಗಸ್ಟ್ 10ರ ಮಧ್ಯರಾತ್ರಿಯಿಂದ ಆಗಸ್ಟ್ 12ನೇ ತಾರೀಖಿನ ಮಧ್ಯರಾತ್ರಿವರಗೆ ಈ ವಿಶೇಷ ಉಡುಗೊರೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಮಹಿಳೆಯರು ರಾಜ್ಯ ಸರ್ಕಾರಿ ಬಸ್ನಲ್ಲಿ ರಾಜ್ಯದಲ್ಲಿ ಎಲ್ಲಿಗೇ ಹೋದರೂ, ಎಷ್ಟೇ ಸಮಯ ಪ್ರಯಾಣ ಮಾಡಿದರೂ ದುಡ್ಡು ಕೊಡುವ ಅಗತ್ಯ ಇರುವುದಿಲ್ಲ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಮಾನ್ಯವಾಗಿ ಪ್ರತಿವರ್ಷವೂ ರಕ್ಷಾ ಬಂಧನದಂದು ಮಹಿಳೆಯರಿಗಾಗಿ ಉಚಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುತ್ತಾರೆ. ಆದರೆ ಇಷ್ಟು ವರ್ಷ 24 ತಾಸುಗಳ ಕಾಲ ಅಂದರೆ ಒಂದೇ ದಿನ ಈ ವಿಶೇಷ ಯೋಜನೆ ಇರುತ್ತಿತ್ತು. ಪ್ರಸಕ್ತ ಬಾರಿ ಎರಡು ದಿನ ಸರ್ಕಾರಿ ಬಸ್ನಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ಮಾಡಬಹುದು. ಅಂದಹಾಗೇ, ಕಳೆದ ವರ್ಷ 3.5 ಲಕ್ಷ ಮಹಿಳೆಯರು ಈ ಸೌಲಭ್ಯ ಪಡೆದುಕೊಂಡಿದ್ದರು.
ಉತ್ತರ ಪ್ರದೇಶದಲ್ಲಿ ರಕ್ಷಾ ಬಂಧನ ನಿಮಿತ್ತ ಸಕಲ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರಿ ಬಸ್ಗಳನ್ನೆಲ್ಲ ಸ್ವಚ್ಛಗೊಳಿಸಲಾಗುತ್ತಿದೆ. ಆಗಸ್ಟ್ 10-12ರವರೆಗೆ ಮೀರತ್, ಸಹರಾನ್ಪುರ, ಬರೇಲಿ, ಲಖನೌ, ಕಾನ್ಪುರ, ಗೋರಖ್ಪುರ, ಪ್ರಯಾಗ್ರಾಜ್ ಮತ್ತು ವಾರಾಣಸಿಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಪತ್ತೆಯಾದ ಈ ತೇಲುವ ಕಲ್ಲು ರಾಮಸೇತುವಿನದ್ದೇ?: ಹೆಚ್ಚಿದ ಕುತೂಹಲ