Site icon Vistara News

Ram Navami Violence: ಹೌರಾ ಗಲಭೆಯ ತನಿಖೆ ಎನ್​ಐಎಗೆ ವಹಿಸಲು ಪ್ರಧಾನಿ ಮೋದಿಗೆ ಮನವಿ; ಅಮಿತ್ ಶಾ ಬಿಹಾರ ಭೇಟಿ ರದ್ದು

Control communal violence in Bihar, Bengal

Control communal violence in Bihar, Bengal

ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ, ಗುಜರಾತ್​, ತೆಲಂಗಾಣ ರಾಜ್ಯಗಳ ಹಲವು ಭಾಗಗಳಲ್ಲಿ ಶ್ರೀರಾಮನವಮಿ ಹಬ್ಬದ ದಿನ ನಡೆದ ಹಿಂಸಾಚಾರದ (Ram Navami Violence)ಉದ್ವಿಗ್ನತೆ ಶುರುವಾದ ಹಿಂಸಾಚಾರದ ಉದ್ವಿಗ್ನತೆ ಶುಕ್ರವಾರವೂ ಮುಂದುವರಿದ ಪರಿಣಾಮ ಇಂದು ಕೂಡ ಬಿಗಿ ಭದ್ರತೆ ವಹಿಸಲಾಗಿದೆ. ಹೈದರಾಬಾದ್​ನಲ್ಲಿ ನಡೆದ ಗಲಭೆಯ ವಿಡಿಯೊವೊಂದು ಇಂದು ವೈರಲ್ ಆಗುತ್ತಿದೆ. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯದ ಗುಂಪೊಂದು ಹಿಂದು ಸಮುದಾಯದವರ ಮೇಲೆ ಹಲ್ಲೆ ಮಾಡಿದ ದೃಶ್ಯವಿದೆ. ಸಂಜೆ ಹೊತ್ತಲ್ಲಿ ರಂಜಾನ್​ ವಿಶೇಷ ಪ್ರಾರ್ಥನೆ ಶುರುವಾಗಿತ್ತು. ಅಷ್ಟೊತ್ತಿಗೆ ಹಿಂದುಗಳು ಒಂದಷ್ಟು ಜನ ಶ್ರೀರಾಮನ ಘೋಷಣೆಗಳನ್ನು ಕೂಗುತ್ತ ಬೈಕ್​​ನಲ್ಲಿ ಹೋದರು. ಅದರಿಂದ ಸಿಟ್ಟಿಗೆದ್ದ ಅಲ್ಪಸಂಖ್ಯಾತರು ಹಲ್ಲೆ ನಡೆಸಿದ್ದಾರೆ ಎಂದು ಹೈದರಾಬಾದ್​ನ ಚಾರ್​ಮಿನಾರ್​ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎನ್​​ಐಎ ತನಿಖೆಗೆ ಪತ್ರ
ಪಶ್ಚಿಮ ಬಂಗಾಳದ ಹೌರಾಹ್​ನಲ್ಲಿ ಶ್ರೀರಾಮನವಮಿ ದಿನ ಮತ್ತು ಮರುದಿನ ಉಗ್ರ ಹಿಂಸಾಚಾರ ನಡೆದಿತ್ತು. ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿಯಾಗಿತ್ತು. ಶುಕ್ರವಾರವೂ ಈ ಗಲಭೆ ಮುಂದುವರಿದಿತ್ತು. ಅಲ್ಲಿನ ಗಲಾಟೆಯಲ್ಲಿ ಭಾಗಿಯಾದ ಸುಮಾರು 36 ಮಂದಿಯನ್ನು ಪೊಲೀಸರು ಬಂಧಿಸಿದ್ದು, ನೂರಾರು ಜನರ ವಿರುದ್ಧ ಕೇಸ್ ದಾಖಲಾಗಿದೆ. ಈ ಮಧ್ಯೆ ಪಶ್ಚಿಮ ಬಂಗಾಳ ಬಿಜೆಪಿ ಸಂಸದ ಜಗನ್ನಾಥ್​ ಸರ್ಕಾರ್​ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ‘ಹೌರಾದಲ್ಲಿ ಕೇಂದ್ರೀಯ ಸಶಸ್ತ್ರಪಡೆಗಳ ನಿಯೋಜನೆ ಮಾಡಿ ಮತ್ತು ಗಲಭೆಯನ್ನು ಎನ್​ಐಎ ತನಿಖೆಗೆ ವಹಿಸಿ’ ಎಂದು ಮನವಿ ಮಾಡಿದ್ದಾರೆ. ಸದ್ಯ ಹೌರಾದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಇನ್ನೂ ಪೊಲೀಸ್ ಬಿಗಿ ಭದ್ರತೆ ಮುಂದುವರಿದಿದೆ. ಸದ್ಯ ಕೋಮು ಗಲಭೆಯ ತನಿಖೆಯನ್ನು ಸಿಐಡಿಗೆ ವಹಿಸಿ, ಪಶ್ಚಿಮ ಬಂಗಾಳ ಸರ್ಕಾರ ಆದೇಶ ಹೊರಡಿಸಿದೆ.

ಅಮಿತ್​ ಶಾ ಸಾಸಾರಾಮ್​ ಭೇಟಿ ರದ್ದು
ಬಿಹಾರದ ಸಾಸಾರಾಮ್​ ಮತ್ತು ನಳಂದಾಗಳಲ್ಲಿ ಶ್ರೀರಾಮನವಮಿ ದಿನ ನಡೆದ ಹಿಂಸಾಚಾರದ ಉದ್ವಿಗ್ನತೆ ಮುಂದುವರಿದೆ. ಈ ಎರಡೂ ಕಡೆ ಸೆಕ್ಷನ್​ 144 ಮುಂದುವರಿದಿದೆ. ಅದರ ಮಧ್ಯೆ ಗೃಹ ಸಚಿವ ಅಮಿತ್​ ಶಾ ಅವರ ಬಿಹಾರ ಭೇಟಿ ರದ್ದಾಗಿದೆ. ಅಮಿತ್ ಶಾ ಅವರು ಇಂದು ಸಂಜೆ 6.25ರ ಹೊತ್ತಿಗೆ ಪಾಟ್ನಾಕ್ಕೆ ತೆರಳಿ, ನಾಳೆ (ಏಪ್ರಿಲ್ 2ರಂದು) ಸಾಸಾರಾಮ್​​ಗೆ ಭೇಟಿ ನೀಡಿ, ಅಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದರು. ಬಳಿಕ ನಾವಡಾದಲ್ಲಿ ಕೂಡ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದರು. ಆದರೆ ಅಲ್ಲಿ ಬಿಗುವಿನ ವಾತಾವರಣ ಮುಂದುವರಿದಿದ್ದರಿಂದ ಭೇಟಿ ರದ್ದಾಗಿದೆ. ಈ ಬಗ್ಗೆ ಬಿಹಾರ ಬಿಜೆಪಿ ಅಧ್ಯಕ್ಷ ಸಮರ್ಥ ಚೌಧರಿ ಮಾಹಿತಿ ನೀಡಿದ್ದಾರೆ. ಇನ್ನು ಬಿಹಾರದ ಸಾಸಾರಾಮ್​ ಮತ್ತು ನಳಂದಾದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಇದುವರೆಗೆ ಪೊಲೀಸರು 45 ಮಂದಿಯನ್ನು ಬಂಧಿಸಿದ್ದಾರೆ. ಅದರಲ್ಲಿ 27 ಜನರು ನಳಂದಾದಲ್ಲಿ ಮತ್ತು 18 ಮಂದಿ ಸಾಸಾರಾಮ್​​ನಲ್ಲಿ ಬಂಧಿತರಾಗಿದ್ದಾರೆ.

ಇದನ್ನೂ ಓದಿ: Ram Navami Violence: ಗುಜರಾತ್‌, ಬಂಗಾಳದಲ್ಲಿ ರಾಮನವಮಿ ಹಿಂಸಾಚಾರ; 60 ಜನರ ಬಂಧನ, ರಾಜಕೀಯ ಮೇಲಾಟ

ಮಹಿಳೆಗೆ ಗಾಯ
ಬಿಹಾರದ ನೌಗಾಚಿಯಾ ಎಂಬಲ್ಲಿ ಕೂಡ ರಾಮನವಮಿ ದಿನ ಗಲಾಟೆ ಉಂಟಾಗಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಅಲ್ಲಿನ ಖಾರಿಕ್​ ಬಜಾರ್​ ಏರಿಯಾದಲ್ಲಿರುವ ಕಾಳಿ ದೇವಸ್ಥಾನದಲ್ಲಿ ಶ್ರೀರಾಮನ ವಿಗ್ರಹವನ್ನು ಇಟ್ಟು ಪೂಜಿಸಲಾಗಿತ್ತು. ಆಚರಣೆಗಳೆಲ್ಲ ಮುಗಿದ ಮೇಲೆ ಶುಕ್ರವಾರ ಆ ವಿಗ್ರಹವನ್ನು ನಿಮಜ್ಜನ ಮಾಡಲು ಗಂಗಾ ಘಾಟ್​​ಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಶ್ರೀರಾಮನ ವಿಗ್ರಹವನ್ನು ನದಿಯಲ್ಲಿ ಮುಳುಗಿಸಿ, ವಾಪಸ್ ಬರುವಾಗ ಅವರ ಮೇಲೆ ಇನ್ನೊಂದು ಕೋಮಿನ ಜನರು ದಾಳಿ ಮಾಡಿದ್ದಾರೆ. ಅದರಲ್ಲಿ ಸುನೈನಾ ದೇವಿ ಎಂಬಾಕೆ ಗಾಯಗೊಂಡಿದ್ದಾಗಿ ವರದಿಯಾಗಿದೆ.

Exit mobile version