ಭೋಪಾಲ್: ಈ ಬಾರಿಯ ರಾಮನವಮಿ ದಿನ ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಗಲಭೆ ಸೃಷ್ಟಿಯಾಗಿತ್ತು. ರಾಮನವಮಿ ಮೆರವಣಿಗೆ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದರು. ಅದಕ್ಕೆ ಹಿಂದು ಯುವಕರು ಪ್ರತಿರೋಧ ಒಡ್ಡಿದ್ದರು. ಈ ವೇಳೆ ಘರ್ಷಣೆ ಏರ್ಪಟ್ಟಿತ್ತು. ಆದರೆ ಈಗ ಮಧ್ಯಪ್ರದೇಶದ ಖರ್ಗೋನ್ನಲ್ಲಿ ನಡೆದಿದ್ದ ಗಲಭೆಗೆ ಸಂಬಂಧಪಟ್ಟಂತೆ 12 ವರ್ಷದ ಹುಡುಗನಿಗೆ ನೋಟಿಸ್ ಬಂದಿದೆ. ಅಂದಿನ ಹಾನಿಯ ಪರಿಹಾರವಾಗಿ 2.9ಲಕ್ಷ ರೂಪಾಯಿ ಕೊಡುವಂತೆ ಮಧ್ಯಪ್ರದೇಶ ರಾಜ್ಯ ಹಕ್ಕುಗಳ ನ್ಯಾಯಾಧಿಕರಣ ಸೂಚಿಸಿದೆ. ಅಷ್ಟೇ ಅಲ್ಲ, ಆತನ ತಂದೆ ಕಲು ಖಾನ್ಗೂ ನೋಟಿಸ್ ನೀಡಲಾಗಿದ್ದು, ಅವರು 4.8 ಲಕ್ಷ ಪಾವತಿ ಮಾಡುವಂತೆ ತಿಳಿಸಿದೆ. ಆರ್ಥಿಕವಾಗಿ ಹಿಂದಿರುವ ಈ ಕುಟುಂಬ ಸದ್ಯ ನಾಯಾಧಿಕರಣದ ಆದೇಶದಿಂದ ಕಂಗಾಲಾಗಿದೆ. ಹಣ ಕೊಡದೆ ಇದ್ದರೆ ಬಂಧನವಾಗುವ ಭೀತಿಯೂ ಆವರಿಸಿದೆ.
ಮಧ್ಯಪ್ರದೇಶದಲ್ಲಿ ಕಳೆದ ಡಿಸೆಂಬರ್ನಲ್ಲಿ ‘ಸಾರ್ವಜನಿಕ ಆಸ್ತಿ ನಾಶ ತಡೆ ಮತ್ತು ವಸೂಲಾತಿ ಕಾಯ್ದೆ’ ಅಂಗೀಕಾರವಾಗಿದೆ. ಅದರ ಅನ್ವಯ ಯಾವುದೇ ಪ್ರತಿಭಟನೆ, ಮುಷ್ಕರ, ಹೋರಾಟಗಳು ನಡೆದಾಗ ಯಾರಾದರೂ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು, ಅಥವಾ ಖಾಸಗಿ ಆಸ್ತಿ, ಮನೆಗಳನ್ನು ಧ್ವಂಸ ಮಾಡಿದರೆ, ಹಾನಿ ಮಾಡಿದರೆ, ಅದಕ್ಕೆ ತಕ್ಕ ಪರಿಹಾರವನ್ನು ಅವರಿಂದಲೇ ಪಡೆಯಬಹುದಾಗಿದೆ. ಈ ಬಾಲಕ ಮತ್ತು ಅವನ ತಂದೆಗೆ ಮುಳುವಾಗಿದ್ದು ಇದೇ ಕಾಯ್ದೆ. ಇವರ ಮನೆಯ ಪಕ್ಕದ ಮನೆಯ ಮಹಿಳೆ ಇವರಿಬ್ಬರ ವಿರುದ್ಧ ದೂರು ಕೊಟ್ಟಿದ್ದರು. ಏಪ್ರಿಲ್ 10ರಂದು ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಇದೇ ಬಾಲಕ, ಅವರ ತಂದೆ ಎಲ್ಲ ಸೇರಿ ನಮ್ಮ ಮನೆಗೆ ಹಾನಿ ಮಾಡಿದ್ದಾರೆ ಎಂದು ಆಕೆ ಹೇಳಿದ್ದರು.
ಮಧ್ಯಪ್ರದೇಶದ ಹೊಸ ಕಾಯ್ದೆಯ ಅನ್ವಯ ಪರಿಹಾರವನ್ನು 15 ದಿನಗಳ ಒಳಗೆ ಪಾವತಿ ಮಾಡದೆ ಇದ್ದರೆ, ಬಳಿಕ ಶೇ.6ರಷ್ಟು ಬಡ್ಡಿಯನ್ನೂ ಕೊಡಬೇಕಾಗುತ್ತದೆ. ನ್ಯಾಯಾಧಿಕರಣವು ಸಿವಿಲ್ ಕೋರ್ಟ್ಗೆ ಸರಿಸಮಾನಾದ ಅಧಿಕಾರವನ್ನು ಹೊಂದಿದೆ. ನೋಟಿಸ್ ಪಡೆದವರು ಮೂರು ತಿಂಗಳಾದರೂ ಪರಿಹಾರ ನೀಡದೆ ಇದ್ದಲ್ಲಿ, ಅವರ ಆಸ್ತಿಪಾಸ್ತಿ ಜಪ್ತಿ ಮಾಡುವ ಅಧಿಕಾರವೂ ಈ ನ್ಯಾಯಾಧಿಕರಣಕ್ಕೆ ಇರುತ್ತದೆ. ಬಾಲಕನ ಕುಟುಂಬದವರಿಗೆ ಈಗ ಈ ಹಣ ಹೊರೆಯಾಗಿದೆ. ‘ಅಂದು ನಡೆದ ಗಲಭೆ-ಸಂಘರ್ಷದಲ್ಲಿ ನನ್ನ ಮಗನ ಪಾತ್ರವಿಲ್ಲ. ಅಂದು ರಾತ್ರಿ ಅವರು ಮನೆಯಲ್ಲಿ ಮಲಗಿ ನಿದ್ರಿಸುತ್ತಿದ್ದರು’ ಎಂದು ಬಾಲಕನ ತಾಯಿ ಅಲವತ್ತುಕೊಂಡಿದ್ದಾರೆ.
ಇನ್ನು ನ್ಯಾಯಾಧಿಕರಣದ ಈ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ‘ಮಧ್ಯಪ್ರದೇಶ ಹಕ್ಕುಗಳ ನ್ಯಾಯಾಧಿಕರಣ ಬಿಜೆಪಿಯ ಅಂಗಸಂಸ್ಥೆಯಂತೆ ಕೆಲಸ ಮಾಡುತ್ತಿದೆ. ಸರಿಯಾಗಿ ವಿಚಾರಣೆ, ಪ್ರಕ್ರಿಯೆಗಳನ್ನು ನಡೆಸದೆ ಏಕಾಏಕಿ ನೋಟಿಸ್ ಕೊಟ್ಟಿದ್ದು ಕ್ರಿಮಿನಲ್ ಎನ್ನಿಸಿಕೊಳ್ಳುತ್ತದೆ’ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಅಂದಹಾಗೇ, ರಾಮನವಮಿ ಸಂರ್ಘದಲ್ಲಿ ಹಾನಿಯಾದ ಬಗ್ಗೆ ನ್ಯಾಯಾಧಿಕರಣಕ್ಕೆ 343 ದೂರುಗಳು ಬಂದಿದ್ದವು. ಅದರಲ್ಲಿ 34 ದೂರುಗಳನ್ನು ಮಾತ್ರ ಮಾನ್ಯ ಮಾಡಿರುವ ಅದು, ಇಲ್ಲಿಯವರೆಗೆ 50 ಜನರಿಂದ 7.46 ಲಕ್ಷ ರೂಪಾಯಿ ವಸೂಲಿ ಮಾಡಿದೆ.
ಇದನ್ನೂ ಓದಿ: ಡಿಕೆಶಿ ಭೇಟಿ ಮಾಡಿಸಿ ಪ್ಲೀಸ್ ಎಂದು ಕಣ್ಣೀರು ಹಾಕುತ್ತಿರುವ ಮಧ್ಯಪ್ರದೇಶದ ಮಹಿಳೆ