ಅಯೋಧ್ಯಾ: ಸುಮಾರು 1,800 ಕೋಟಿ ರೂಪಾಯಿ ವೆಚ್ಚದಲ್ಲಿ ರಾಮಮಂದಿರ(Ayodhya Ram Temple)ವನ್ನು ನಿರ್ಮಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ. ದೇಗುಲ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಟ್ರಸ್ಟ್ ಹೊತ್ತುಕೊಳ್ಳಲಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದೆ. ಈ ಸಂಬಂಧ ಅನೇಕ ಸುತ್ತಿನ ಮಾತುಕತೆಗಳು ನಡೆದು, ಅಂತಿಮವಾಗಿ ಟ್ರಸ್ಟ್ ರೂಪಿಸಲಾಗಿದೆ.
ಇಲ್ಲಿನ ಫೈಜಾಬಾದ್ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸಭೆಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಶ್ರೀ ರಾಮಮಂದಿರ ಕಾಂಪ್ಲೆಕ್ಸ್‌ನೊಳಗೆ ಪ್ರಮುಖ ಹಿಂದೂ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ನಿರ್ಧಾರವನ್ನು ಅವಿರೋಧವಾಗಿ ಕೈಗೊಳ್ಳಲಾಯಿತು.
ತಜ್ಞರು ಸಲ್ಲಿಸಿದ ವರದಿಯ ಪ್ರಕಾರ, ರಾಮ ಮಂದಿರ ನಿರ್ಮಾಣಕ್ಕೆ ಅಂದಾಜು 1,800 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈಗ ನಡೆದ ಸಭೆಯಲ್ಲಿ ಟ್ರಸ್ಟ್‌ನ 15 ಸದಸ್ಯರ ಪೈಕಿ 14 ಸದಸ್ಯರು ಭಾಗವಹಿಸಿದ್ದರು ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ತಿಳಿಸಿದ್ದಾರೆ.
ದೇಗುಲ ನಿರ್ಮಾಣ ಸಮಿತಿ ಚೇರ್ಮನ್ ನೃಪೇಂದ್ರ ಮಿಶ್ರಾ, ಟ್ರಸ್ಟ್ ಚೇರ್ಮನ್ ಮಹಾಂತ್ ನೃತ್ಯ ಗೋಪಾಲ್ ದಾಸ್, ಖಜಾಂಚಿ ದೇವ್ ಗಿರಿ, ಸದಸ್ಯರಾದ ಉಡುಪಿ ಪೀಠಾಧೀಶ್ವರ ವಿಶ್ವತೀರ್ಥ ಪ್ರಸನ್ನಾಚಾರ್ಯ, ಡಾ. ಅನಿಲ್ ಮಿಶ್ರಾ, ಮಹಾಂತ್ ದಿನೇಂದ್ರ ದಾಸ್, ಕಾಮೇಶ್ವರ್ ಚೌಪಾಲ್, ನಿತೀಶ್ ಕುಮಾರ್ ಅವರು ಸಭೆಯಲ್ಲಿ ಹಾಜರಿದ್ದರು. ಕೇಶವ ಪರಶರಣ್, ಯುಗಪುರುಷ ಪರಮಾನಂದ, ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಮತ್ತು ಸಂಜಯ್ ಕುಮಾರ್ ಅವರು ವರ್ಚುವಲ್ ಆಗಿ ಭಾಗವಹಿಸಿದ್ದರು.
ಇದನ್ನೂ ಓದಿ | ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ 40% ಕಾಮಗಾರಿ ಪೂರ್ಣ