ಆಗ್ರಾ: ರಾಮಚರಿತಮಾನಸದ (Ramcharitmanas Row) ಕೆಲವು ಪದ್ಯಗಳು ಸಮಾಜದಲ್ಲಿ ತಾರತಮ್ಯವನ್ನು ಬೋಧಿಸುತ್ತವೆ ಎಂದು ಸಮಾಜವಾದ ಪಕ್ಷದ(SP) ನಾಯಕ ಸ್ವಾಮಿ ಪ್ರಸಾದ ಮೌರ್ಯ (Swami Prasad Maurya) ಅವರು ಹೇಳಿದ್ದರು. ಈ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ, ಅಖಿಲ ಭಾರತ ಹಿಂದೂ ಮಹಾಸಭಾದ ಸ್ಥಳೀಯ ನಾಯಕರೊಬ್ಬರು, ಸ್ವಾಮಿ ಪ್ರಸಾದ ಮೌರ್ಯ ಅವರ ನಾಲಿಗೆಯನ್ನು ಕತ್ತರಿಸಿದವರಿಗೆ 51 ಸಾವಿರ ರೂ. ಬಹುಮಾನ ಘೋಷಣೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮೌರ್ಯ ಅವರು ಹಿಂದುಳಿದ ವರ್ಗದ ನಾಯಕರೆಂದು ಗುರುತಿಸಿಕೊಂಡಿದ್ದಾರೆ.
ಇತ್ತೀಚೆಗೆ ಅವರು ಮಾತನಾಡುತ್ತಾ, ರಾಮಚರಿತಮಾನಸದ ಕೆಲವು ಪದ್ಯಗಳು ಸಮಾಜದಲ್ಲಿ ತಾರತಮ್ಯವನ್ನು ಪ್ರಚೋದಿಸುತ್ತವೆ. ಜಾತಿಯಾಧಾರದ ಮೇಲೆ ಸಮಾಜದ ಬಹುದೊಡ್ಡ ವರ್ಗಕ್ಕೆ ಅವಮಾನ ಮಾಡುವಂತಿವೆ. ಹಾಗಾಗಿ, ರಾಮಚರಿತಮಾನಸವನ್ನು ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಹಿಂದು ಮಹಾಸಭಾದ ಸ್ಥಳೀಯ ನಾಯಕ ಸೌರಭ ಶರ್ಮಾ ಅವರು, ಸ್ವಾಮಿ ಪ್ರಸಾದ್ ಮೌರ್ಯ ಅವರು ನಮ್ಮ ಧಾರ್ಮಿಕ ಗ್ರಂಥಕ್ಕೆ ಅವಮಾನ ಮಾಡಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರ ನಾಲಿಗೆಯನ್ನು ಕತ್ತರಿಸುವ ಧೈರ್ಯಶಾಲಿಗೆ 51 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಇದೇ ವೇಳೆ, ಅಖಿಲ ಭಾರತ ಹಿಂದು ಮಹಾಸಭಾದ ಕಾರ್ಯಕರ್ತರು ಸಾಂಕೇತಿಕವಾಗಿ ಮೌರ್ಯ ಅವರ ಪ್ರತಿಕೃತಿ ಮೆರವಣಿಗೆ ಮಾಡಿ, ಅದನ್ನು ಯಮುನಾ ನದಿಯಲ್ಲಿ ಎಸೆದಿದ್ದಾರೆ.
ಇದನ್ನೂ ಓದಿ: Ramcharitmanas Row | ರಾಮಚರಿತಮಾನಸ ವಿವಾದ, ಸಚಿವ ಚಂದ್ರಶೇಖರ್ ನಾಲಗೆ ಕತ್ತರಿಸಿದರೆ 10 ಕೋಟಿ ರೂ. ಬಹುಮಾನ ಘೋಷಣೆ
ಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮಾಡಿರುವ ಅವಹೇಳನಕಾರಿ ಹೇಳಿಕೆಯನ್ನು ನಾವು ವಿರೋಧಿಸುತ್ತೇವೆ. ಮಾಜಿ ಸಚಿವರು ಬಿಎಸ್‌ಪಿಯಲ್ಲಿದ್ದಾಗ ‘ಜೈ ಭೀಮ್, ಜೈ ಭಾರತ್’ ಎಂದು ಹೇಳುತ್ತಿದ್ದರು. ಅವರು ಬಿಜೆಪಿಗೆ ಸೇರಿದಾಗ ಅವರು ರಾಮಚರಿತಮಾನಸವನ್ನು ಗೌರವಿಸಲು ಪ್ರಾರಂಭಿಸಿದರು. ಈಗ ಅವರು ಸಮಾಜವಾದಿ ಪಕ್ಷಕ್ಕೆ ಸೇರಿದ್ದು, ಆಕ್ಷೇಪಾರ್ಹವಾಗಿ ಮಾತನಾಡುತ್ತಿದ್ದಾರೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ ಸಂಜಯ್ ಜಾಟ್ ಹೇಳಿದ್ದಾರೆ.