ಮುಂಬೈ: ಬಾಲಿವುಡ್ ನಟ ರಣದೀಪ್ ಹೂಡಾ (Randeep Hooda) ಮಣಿಪುರದ ಇಂಫಾಲ್‌ನಲ್ಲಿ ನವೆಂಬರ್ 29ರಂದು ಮಣಿಪುರದ ನಟಿ, ಮಾಡೆಲ್ ಲಿನ್ ಲೈಶ್ರಾಮ್ (Lin Laishram) ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಣದೀಪ್ ಮತ್ತು ಲಿನ್ ಲೈಶ್ರಾಮ್ ಮಣಿಪುರದ ಸಾಂಪ್ರದಾಯಿಕ ಮೈತಿ ಪದ್ಧತಿಯಲ್ಲಿ (Meitei wedding) ವಿವಾಹಿತರಾಗಿದ್ದಾರೆ.
ಗಮನ ಸೆಳೆದ ಸಂಪ್ರದಾಯ
ಸದ್ಯ ಮೈತಿ ಪದ್ಧತಿಯ ಈ ವಿವಾಹ ಸಂಪ್ರದಾಯ ಅನೇಕರ ಗಮನ ಸೆಳೆದಿದೆ. ಮೈತಿ ಎಂದರೆ ಮಣಿಪುರದ ಒಂದು ಸಮುದಾಯ. ಮೈತಿ ವಿವಾಹವು ಶ್ರೀಮಂತ ಸಂಪ್ರದಾಯ ಮತ್ತು ಆಚರಣೆಯನ್ನು ಒಳಗೊಂಡಿದೆ. ಇಲ್ಲಿನ ಸಂಪ್ರದಾಯದಲ್ಲಿ ವಧು ಮತ್ತು ವರರನ್ನು ಭಗವಾನ್ ಶ್ರೀಕೃಷ್ಣ ಮತ್ತು ರಾಧೆ ಎಂದೇ ಪರಿಗಣಿಸಲಾಗುತ್ತದೆ.
Congratulations 🎉🎊🎈#RandeepHoodaWedding #RandeepHooda #LinLaishram #JustMarried #hooda pic.twitter.com/Wp7AnMDX2a
— Harendra Yadav (@harendray75) November 29, 2023
ವೈಶಿಷ್ಟ್ಯ
ಸ್ಥಳೀಯ ಮೈತಿ ಉಪಭಾಷೆಯಲ್ಲಿ ಲುಹೋಂಗ್ಬಾ ಎಂದು ಕರೆಯಲ್ಪಡುವ ಮದುವೆಯ ದಿನದಂದು ಪ್ರಸ್ತುತ ಪಡಿಸುವ ಹಾಡುಗಳನ್ನು ಕೃಷ್ಣ ಮತ್ತು ರಾಧೆಗೆ ಸಮರ್ಪಿಸಲಾಗುತ್ತದೆ. ಈ ಹಿಂದೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮದುವೆ ಆಮಂತ್ರಣ ಪತ್ರಿಕೆ ಹಂಚಿಕೊಂಡಿದ್ದ ರಣದೀಪ್ ಹೂಡಾ, ʼʼಪುರಾಣದ ಪ್ರಕಾರ ʼಮಹಾಭಾರತʼದ ಅರ್ಜುನ ಮಣಿಪುರದ ರಾಜಕುಮಾರಿ ಚಿತ್ರಾಂಗದೆಯನ್ನು ವರಿಸಿದ್ದನು. ನಮ್ಮ ಕುಟುಂಬ ಮತ್ತು ಸ್ನೇಹಿತರ ಆಶೀರ್ವಾದದೊಂದಿಗೆ ನಾವು ಮದುವೆಯಾಗುತ್ತಿದ್ದೇವೆʼʼ ಎಂದು ಮಹಾಭಾರತವನ್ನು ಉಲ್ಲೇಖಿಸಿದ್ದರು.
ಇನ್ನು ವಧು ಲಿನ್ ಲೈಶ್ರಾಮ್ ಮದುವೆಯ ದಿನದಂದು ಸಾಂಪ್ರದಾಯಿಕ ಪೊಟ್ಲೋಯ್ ಸ್ಕರ್ಟ್ ಧರಿಸಿದ್ದರು. ಇದು ಬಿದಿರಿನಿಂದ ತಯಾರಿಸಿದ ಮಣಿಪುರದ ಸಾಂಪ್ರದಾಯಿಕ ಉಡುಪು. ಇದನ್ನು ನುರಿತ ಸಾಂಪ್ರದಾಯಿಕ ನೇಕಾರರು ಕೈಯಿಂದ ಕಸೂತಿ ಮಾಡುತ್ತಾರೆ. ಕುತೂಹಲಕಾರಿ ಸಂಗತಿಯೆಂದರೆ ಮದುವೆಗೆ ಕೆಲವು ಗಂಟೆಗಳ ಮೊದಲು ವಧುವಿನ ಪೊಟ್ಲೋಯ್ ಉಡುಗೆಯನ್ನು ಹೊಲಿಯುವುದು ಸಂಪ್ರದಾಯ. ಪೊಟ್ಲೋಯ್ ಸಾಮಾನ್ಯವಾಗಿ ಗಾಢ ಹಸುರು ಬಣ್ಣ ಹೊಂದಿರುತ್ತದೆ. ಅಲ್ಲದೆ ಸೊಂಟದ ಸುತ್ತಲೂ ನೇಯ್ದ ಬೆಲ್ಟ್ ಮತ್ತು ಇನ್ನಾಫಿ, ಮಸ್ಲಿನ್ ಶಾಲನ್ನು ಒಳಗೊಂಡಿರುತ್ತದೆ. ರಾಧೆಯನ್ನು ಝಪಾ ಎಂದು ಕರೆಯುವುದರಿಂದ ವಧುವಿಗೆ ಚಿನ್ನದ ಆಭರಣಗಳು ಮತ್ತು ಶಿರಸ್ತ್ರಾಣವನ್ನು ತೊಡಿಸಲಾಗುತ್ತದೆ.
ವಿವಾಹ ಸಮಾರಂಭದ ವೇಳೆ ರಣದೀಪ್ ಹೂಡಾ ಬಿಳಿ ಧೋತಿ ಮತ್ತು ಕೊಕ್ಯೆಟ್ ಎಂಬ ಸಾಂಪ್ರದಾಯಿಕ ಪೇಟವನ್ನು ಧರಿಸಿದ್ದರು. ಜತೆಗೆ ಶುದ್ಧತೆ ಮತ್ತು ಪ್ರಶಾಂತತೆಯ ಸಂಕೇತವಾದ ಸರಳ ಬಿಳಿ ಶಾಲು ಹೊದೆದಿದ್ದರು. ಈ ಹಿಂದೆ ಮೈಟಿ ಸಂಪ್ರದಾಯದಲ್ಲಿ ವಿವಾಹವಾಗುವ ಬಗ್ಗೆ ರಣದೀಪ್ ಹೂಡಾ ಸಂತಸ ವ್ಯಕ್ತಪಡಿಸಿದ್ದರು. ʼʼವಧುವಿನ ಸಂಪ್ರದಾಯದಂತೆ ಮದುವೆಯಾಗುವುದು ಗೌರವಯುತ ವಿಷಯ ಎಂದು ನಾನು ಭಾವಿಸಿದ್ದೇನೆ. ಇದು ಸಮಾರಂಭಕ್ಕಿಂತ ಮಿಗಿಲಾಗಿ ಸಾಂಪ್ರದಾಯ ಮತ್ತು ಸಾಂಸ್ಕೃತಿಕತೆಯ ವಿನಿಮಯ. ನಾವು ಬಹಳ ಸಮಯದಿಂದ ಸ್ನೇಹಿತರಾಗಿದ್ದೆವು. ಈಗ ಒಂದೇ ಕುಟುಂಬದವರಾಗಿ ಬದಲಾಗುತ್ತಿದ್ದೇವೆʼʼ ಎಂದು ಹೇಳಿದ್ದರು.
ಇದನ್ನೂ ಓದಿ: Randeep Hooda: ಮಣಿಪುರ ʼರಾಜಕುಮಾರಿʼ ಜತೆ ರಣದೀಪ್ ಹೂಡಾ ಮದುವೆ; ಡೇಟ್ ಅನೌನ್ಸ್!
ಸುಹಾಸ್ ಚಟರ್ಜಿ ತಮ್ಮ ಪುಸ್ತಕ ʼಎ ಸೋಷಿಯೋ-ಎಕನಾಮಿಕ್ ಹಿಸ್ಟರಿ ಆಫ್ ಸೌತ್ ಅಸ್ಸಾಂʼನಲ್ಲಿ ಬರೆದಿರುವ ಪ್ರಕಾರ, ಮೈಟಿ ಜನಾಂಗೀಯತೆ ಬಂಗಾಳದ ವೈಷ್ಣವ ಧರ್ಮದಿಂದ ಬಂದಿರುವುದರಿಂದ, ಇವರ ವಿವಾಹ ಸಂಪ್ರದಾಯ ಬಂಗಾಳಿಗಳ ವೈವಾಹಿಕ ಪದ್ಧತಿಯನ್ನು ಹೋಲುತ್ತದೆಯಂತೆ. ಒಟ್ಟಿನಲ್ಲಿ ಈ ವಿವಾಹ ಮತ್ತೊಮ್ಮೆ ಶ್ರೀಮಂತ ಸಂಸ್ಕೃತಿಯ ಪರಿಚಯ ಮಾಡಿಕೊಟ್ಟಿದೆ ಎಂದು ಹಲವರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಶೀಘ್ರದಲ್ಲೇ ರಣದೀಪ್ ಹೂಡಾ ಅಭಿನಯಿಸಿದ ʻಸ್ವಾತಂತ್ರ್ಯ ವೀರ್ ಸಾವರ್ಕರ್ʼ ಸಿನಿಮಾ ತೆರೆಗೆ ಬರಲಿದೆ. ಜತೆಗೆ ‘ಅನ್‌ಫೇರ್ ಆ್ಯಂಡ್ ಲವ್ಲಿ’ ಮತ್ತು ‘ಲಾಲ್ ರಂಗ್ 2’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.