ನವ ದೆಹಲಿ: ಪಿಎಂ ಕೇರ್ಸ್ ನಿಧಿ (PM CARES Fund)ಗೆ ಟ್ರಸ್ಟಿಗಳನ್ನಾಗಿ ಟಾಟಾ ಸನ್ಸ್ ಮಾಜಿ ಅಧ್ಯಕ್ಷ, ಹಿರಿಯ ಉದ್ಯಮಿ ರತನ್ ಟಾಟಾ, ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ ಕೆ.ಟಿ.ಥೋಮಸ್, ಲೋಕಸಭಾ ಮಾಜಿ ಸ್ಪೀಕರ್ ಕರಿಯಾ ಮುಂಡಾ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಹಾಗೇ, ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ರಾಜೀವ್ ಮಹರ್ಷಿ, ಇನ್ಫೋಸಿಸ್ ಫೌಂಡೇಶನ್ ಮಾಜಿ ಅಧ್ಯಕ್ಷೆ ಸುಧಾಮೂರ್ತಿ, ಟೆಕ್ ಫಾರ್ ಇಂಡಿಯಾದ ಸಹ ಸಂಸ್ಥಾಪಕ ಆನಂದ್ ಶಾ ಅವರನ್ನು ಪಿಎಂ ಕೇರ್ಸ್ನ ಸಲಹಾ ಮಂಡಳಿಗೆ ನಾಮನಿರ್ದೇಶನ ಮಾಡಿದ್ದಾಗ್ಯೂ ಸರ್ಕಾರ ಮಾಹಿತಿ ನೀಡಿದೆ.
ಪಿಎಂ ಕೇರ್ಸ್ ಫಂಡ್ನ ಟ್ರಸ್ಟಿಗಳ ಮಂಡಳಿ ಸಭೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದಿತ್ತು. ಅದರ ಬೆನ್ನಲ್ಲೇ ಸರ್ಕಾರ ಹೊಸ ಟ್ರಸ್ಟಿಗಳ ನೇಮಕಾತಿ ಬಗ್ಗೆ ಪ್ರಕಟಣೆ ಹೊರಡಿಸಿದೆ. ಹೊಸದಾಗಿ ನಾಮನಿರ್ದೇಶನಗೊಂಡ ಟ್ರಸ್ಟಿಗಳೂ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರನ್ನು ಪ್ರಧಾನಿ ಮೋದಿ ಆದರದಿಂದ ಸ್ವಾಗತಿಸಿದರು ಎಂದು ಹೇಳಲಾಗಿದೆ.
ಪಿಎಂ ಕೇರ್ಸ್ (PM CARES- Prime Minister’s Citizen Assistance and Relief in Emergency Situations Fund) ಎಂಬುದು ತುರ್ತು ಸಂದರ್ಭಗಳಲ್ಲಿ ನಾಗರಿಕರಿಗೆ ಹಣದ ನೆರವು ಮತ್ತು ಪರಿಹಾರ ನೀಡುವ ಸಲುವಾಗಿ ಪ್ರಾರಂಭವಾದ ಒಂದು ನಿಧಿ. 2020ರಲ್ಲಿ ಮಾರ್ಚ್ 27ರಂದು ಇದು ಸ್ಥಾಪಿತವಾಗಿದೆ. ಕೊವಿಡ್ 19 ಸಾಂಕ್ರಾಮಿಕ ರೋಗ ಪ್ರಾರಂಭವಾದ ಸಂದರ್ಭದಲ್ಲಿ ಪಿಎಂ ಕೇರ್ಸ್ ಶುರು ಮಾಡಲಾಗಿದೆ. ಈಗಿರುವ ಕೊರೊನಾ ವಿರುದ್ಧದ ಮತ್ತು ಮುಂದಿನ ದಿನಗಳಲ್ಲಿ ಬರಬಹುದಾದ ಇಂಥ ಸಾಂಕ್ರಾಮಿಕಗಳ ವಿರುದ್ಧದ ಹೋರಾಟ, ಇದರ ಮಧ್ಯೆ ಬರಬಹುದಾದ ತುರ್ತು ಸನ್ನಿವೇಶಗಳನ್ನು ನಿಭಾಯಿಸಲು ಈ ನಿಧಿ ಸಹಾಯಕ್ಕೆ ಬರಲಿದೆ. ಹಾಗೇ, ಇದರಡಿ ಮಕ್ಕಳ ಶಿಕ್ಷಣಕ್ಕಾಗಿಯೂ ಯೋಜನೆ ರೂಪಿಸಲಾಗಿದೆ.
ಪಿಎಂ ಕೇರ್ಸ್ ಫಂಡ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷರಾಗಿದ್ದು, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸದಸ್ಯರಾಗಿದ್ದಾರೆ. ವ್ಯಕ್ತಿಗಳು, ವಿವಿಧ ಸಂಸ್ಥೆಗಳು ಈ ನಿಧಿಗೆ ಕೊಡುಗೆ ಕೊಡುತ್ತಿದ್ದಾರೆಯೇ ಹೊರತು ಕೇಂದ್ರ ಸರ್ಕಾರ ಬಜೆಟ್ನಲ್ಲಿ ಹಣ ಮೀಸಲಿಡುವುದಿಲ್ಲ.
ಇದನ್ನೂ ಓದಿ: PM Cares : ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಆರೈಕೆಗೆ, ಪಿಎಂ ಕೇರ್ಸ್ ಯೋಜನೆಯ ಸೌಲಭ್ಯ ವಿತರಣೆ