ಆಸ್ಕರ್ ಗೆಲ್ಲುವ ಮೂಲಕ ವಿಶ್ವದಲ್ಲೇ ಖ್ಯಾತಿಗಳಿಸಿದ, ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ (RRR Movie)ದಲ್ಲಿ ಬ್ರಿಟಿಷ್ ಗವರ್ನರ್ ಸ್ಕಾಟ್ ಬಕ್ಸ್ಟನ್ ಪಾತ್ರವನ್ನು ನಿರ್ವಹಿಸಿದ್ದ ರೇ ಸ್ಟೀವನ್ಸನ್ (58) (Ray Stevenson) ಮೇ 21ರಂದು ನಿಧನರಾಗಿದ್ದಾರೆ. ಇವರ ಪೂರ್ತಿ ಹೆಸರು ಜಾರ್ಜ್ ರೇಮಂಡ್ ಸ್ಟೀವನ್ಸನ್ ಎಂದಾಗಿದ್ದು, ಉತ್ತರ ಐರಿಶ್ ನಟ. ಮೂಲತಃ ಲಂಡನ್ನ ಲಿಸ್ಬರ್ನ್ನವರಾಗಿದ್ದರು. ರೇ ಸ್ಟೀವನ್ಸನ್ ನಿಧನ (Ray Stevenson Died)ಹೊಂದಿದ್ದಾರೆಂಬ ಸುದ್ದಿಯನ್ನು ಆರ್ಆರ್ ಆರ್ ಸಿನಿಮಾದ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ದೃಢಪಡಿಸಲಾಗಿದೆ. ಚಿತ್ರ ನಿರ್ದೇಶಕ ರಾಜಮೌಳಿ ಅವರು ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಆರ್ಆರ್ಆರ್ ಸಿನಿಮಾದಲ್ಲಿ ಅವರ ಸ್ಕಾಟ್ ಪಾತ್ರದ ಫೋಟೋವೊಂದನ್ನು ಶೇರ್ ಮಾಡಿರುವ ಆರ್ಆರ್ಆರ್ ಸಿನಿಮಾ ತಂಡ ‘ನಮಗೆಲ್ಲರಿಗೂ ಇದು ಶಾಕಿಂಗ್ ಸುದ್ದಿ. ರೇ ಸ್ಟೀವನ್ಸನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರು ನಮ್ಮೆಲ್ಲರ ಹೃದಯದಲ್ಲಿ ಎಂದೆಂದಿಗೂ ಸರ್ ಸ್ಕಾಟ್ ಆಗಿಯೇ ಉಳಿಯಲಿದ್ದಾರೆ ಎಂದು ಹೇಳಿದೆ.
ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ತೆಗೆಯಲಾದ ಫೋಟೋವೊಂದನ್ನು ಶೇರ್ ಮಾಡಿದ ಆರ್ಆರ್ಆರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ‘ರೇ ಸ್ಟೀವನ್ಸನ್ ಅವರ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲೇ ಸಾಧ್ಯವಾಗುತ್ತಿಲ್ಲ. ನಿಜಕ್ಕೂ ಶಾಕ್ ಆಗಿದೆ. ನಮ್ಮ ಚಿತ್ರದ ಚಿತ್ರೀಕರಣಕ್ಕೆ ಬರುವಾಗ ರೇ ಅವರು ಯಾವಾಗಲೂ ದೊಡ್ಡದಾದ ಶಕ್ತಿ ಮತ್ತು ಚೈತನ್ಯವನ್ನು ಹೊತ್ತು ತರುತ್ತಿದ್ದರು. ಅದನ್ನವರು ಎಲ್ಲರಿಗೂ ಹಂಚುತ್ತಿದ್ದರು. ಅವರೊಂದಿಗೆ ಕೆಲಸ ಮಾಡುವುದು ಸಿಕ್ಕಾಪಟೆ ಖುಷಿ ತರುತ್ತಿತ್ತು. ರೇ ಆತ್ಮ ಚಿರಶಾಂತಿಯಲ್ಲಿ ನೆಲೆಸಲಿ ಎಂದಿದ್ದಾರೆ.
ರೇ ಸ್ಟೀವನ್ಸನ್ ಅವರು ಹುಟ್ಟಿದ್ದು 1964ರ ಮೇ 25ರಂದು. 1990ರ ದಶಕದಲ್ಲಿ ಇವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಮೊದಲು ಯುರೋಪಿಯನ್ ಟಿವಿ ಸೀರೀಸ್ಗಳು, ಟೆಲಿಫಿಲ್ಮ್ಗಳಲ್ಲಿ ನಟಿಸುತ್ತಿದ್ದರು. 1998ರಲ್ಲಿ ಇವರು ನಟಿಸಿದ್ದ ದಿ ಥೇರಿ ಆಫ್ ಫ್ಲೈಟ್ ಚಿತ್ರ ಇವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಯೋಧನ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದರು. 2004ರಲ್ಲಿ ಕಿಂಗ್ ಅರ್ತೂರ್, 2008ರಲ್ಲಿ ಪನಿಶರ್: ವಾರ್ ಝೋನ್, 2010ರಲ್ಲಿ ದಿ ಬುಕ್ ಆಫ್ ಅಲಿ, ದಿ ಅದರ್ ಗಯ್ಸ್ ಸಿನಿಮಾಗಳಲ್ಲಿ ನಟಿಸಿದ್ದರು.