ಜೈಪುರ: ಆರ್ಬಿಐ (ಭಾರತೀಯ ರಿಸರ್ವ್ ಬ್ಯಾಂಕ್) ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಇಂದು ಬೆಳಗ್ಗೆ ಭಾರತ್ ಜೋಡೋ ಯಾತ್ರೆಯಲ್ಲಿ, ರಾಹುಲ್ ಗಾಂಧಿಯವರೊಂದಿಗೆ ಪಾದಯಾತ್ರೆ ನಡೆಸಿದರು. ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಸದ್ಯ ರಾಜಸ್ಥಾನದ ಸವಾಯಿ ಮಾಧೋಪುರದ ಭಡೋತಿ ಎಂಬಲ್ಲಿ ನಡೆಯುತ್ತಿದೆ. ಇಂದು ಮುಂಜಾನೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಲ್ನಡಿಗೆ ಪ್ರಾರಂಭವಾದ ಕೆಲವೇ ಹೊತ್ತಲ್ಲಿ, ರಘುರಾಮ್ ರಾಜನ್ ಯಾತ್ರೆಯನ್ನು ಕೂಡಿಕೊಂಡಿದ್ದಾರೆ.
ರಾಹುಲ್ ಗಾಂಧಿ ಮತ್ತು ರಘುರಾಮ್ ರಾಜನ್ ಅವರಿಬ್ಬರೂ ಒಟ್ಟಿಗೇ ನಡೆಯುತ್ತಿರುವ ಫೋಟೋ ಶೇರ್ ಮಾಡಿದ ಕಾಂಗ್ರೆಸ್ ‘ದ್ವೇಷದ ವಿರುದ್ಧ ದೇಶವನ್ನು ಒಗ್ಗೂಡಿಸುವವರ ಜತೆ ಬೆಂಬಲವಾಗಿ ನಿಲ್ಲುವವರ ಸಂಖ್ಯೆ ಹೆಚ್ಚುತ್ತಿದೆ. ಅಂದರೆ ನಾವು ನಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತಿದ್ದೇವೆ ಎಂದೇ ಅರ್ಥ’ ಎಂದು ಕ್ಯಾಪ್ಷನ್ ಬರೆದಿದೆ. ರಘುರಾಮ್ ರಾಜನ್ ಅವರು 2013ರಿಂದ 2016ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಆಗಿದ್ದರು. 2016ರಲ್ಲಿ ಹಲವು ಆರೋಪಗಳನ್ನು ಹೊತ್ತು ಅವರು ತಮ್ಮ ಸ್ಥಾನದಿಂದ ನಿರ್ಗಮಿಸಿದ್ದರು. ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಅವರು ರಘುರಾಮ್ ರಾಜನ್ ವಿರುದ್ಧ ‘ಗೌಪ್ಯ ಮಾಹಿಸಿ ಸೋರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳಿಗೆ ಬಡ್ಡಿದರ ಹೆಚ್ಚಳ’ ಇತ್ಯಾದಿ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ರಘುರಾಮ್ ರಾಜನ್ ಗವರ್ನರ್ ಹುದ್ದೆ ತ್ಯಜಿಸಿದ ಬಳಿಕವೂ ಹಲವು ಬಾರಿ ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರೀಗ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ರಾಜಸ್ಥಾನದಲ್ಲಿ 10ದಿನಗಳಿಂದ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರವೇ ಇರುವ ರಾಜಸ್ಥಾನದಲ್ಲಿ ಯಾತ್ರೆಗೆ ದೊಡ್ಡಮಟ್ಟದ ಬೆಂಬಲವೂ ವ್ಯಕ್ತವಾಗುತ್ತಿದೆ. ಭಡೋತಿಯಲ್ಲಿ ಇಂದು 25 ಕಿಮೀ ದೂರ ಕ್ರಮಿಸಲಿರುವ ಭಾರತ್ ಜೋಡೋ ಯಾತ್ರೆ, ನಾಳೆ ದೌಸಾ ಜಿಲ್ಲೆ ಪ್ರವೇಶ ಮಾಡಲಿದೆ. ಪ್ರಮುಖ ನಾಯಕರಾದ ಗೋವಿಂದ್ ದೋಟಸಾರಾ, ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಮತ್ತಿತರರು ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆ ಸೇರಿಕೊಂಡ ಆದಿತ್ಯ ಠಾಕ್ರೆ; ರಾಹುಲ್ ಗಾಂಧಿ ಪಕ್ಕದಲ್ಲಿ ಹೆಜ್ಜೆಹಾಕಿದ ಉದ್ಧವ್ ಪುತ್ರ