Site icon Vistara News

ಗರ್ಭಿಣಿಯರು ಸುಂದರಕಾಂಡ ಓದಬೇಕು; ’ಗರ್ಭ ಸಂಸ್ಕಾರ’ ನೀಡಿದ ತೆಲಂಗಾಣ ರಾಜ್ಯಪಾಲೆ ತಮಿಳಿಸಾಯಿ ಸೌಂದರರಾಜನ್‌

Telangana Governor Tamilisai Soundararajan

#image_title

ತೆಲಂಗಾಣ: ಸ್ತ್ರೀರೋಗ ತಜ್ಞರೂ, ಭ್ರೂಣದ ಚಿಕಿತ್ಸಕರೂ ಆಗಿರುವ ತೆಲಂಗಾಣ ರಾಜ್ಯಪಾಲೆ ತಮಿಳಿಸಾಯಿ ಸೌಂದರರಾಜನ್‌ (Telangana Governor Tamilisai Soundararajan) ಅವರು ಗರ್ಭಿಣಿಯರಿಗೆ ಒಂದು ಸಲಹೆಯನ್ನು ಕೊಟ್ಟಿದ್ದಾರೆ. ‘ಗರ್ಭಿಣಿಯರು ರಾಮಾಯಣ, ಅದರ ಒಂದು ಭಾಗವಾಗಿರುವ ಸುಂದರಕಾಂಡದಂಥ ಧಾರ್ಮಿಕ ಪುಸ್ತಕಗಳನ್ನು ಓದಬೇಕು. ಇದು ಹೊಟ್ಟೆಯಲ್ಲಿರುವ ಭ್ರೂಣದ ಮಾನಸಿಕ, ದೈಹಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ. ಆರ್​ಎಸ್​​ಎಸ್​ ಮಹಿಳಾ ಘಟಕವಾದ ರಾಷ್ಟ್ರ ಸೇವಿಕಾ ಸಂಘವು ತೆಲಂಗಾಣದಲ್ಲಿ ಆಯೋಜಿಸಿದ್ದ ಗರ್ಭಸಂಸ್ಕಾರ (Garbha Sanskar) ಕಾರ್ಯಕ್ರಮದಲ್ಲಿ ಮಾತನಾಡುತ್ತ ಅವರು, ಗರ್ಭಿಣಿಯರಿಗೆ ಹೀಗೊಂದು ಸಲಹೆ ನೀಡಿದ್ದಾರೆ.

ಸಂಸ್ಕಾರವಂತ ಮತ್ತು ರಾಷ್ಟ್ರಭಕ್ತ ಮಕ್ಕಳ ಜನನಕ್ಕಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಿಳಾ ಘಟಕವಾದ ರಾಷ್ಟ್ರ ಸೇವಿಕಾ ಸಂಘದ ಅಂಗಸಂಸ್ಥೆಯಾದ ಸಂವರ್ಧಿನಿ ನ್ಯಾಸ್‌ (Samvardhinee Nyas), ದೇಶಾದ್ಯಂತ ಗರ್ಭಸಂಸ್ಕಾರ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜನಿಸುವ ಮಕ್ಕಳಲ್ಲಿ ಸಂಸ್ಕೃತಿ, ಮೌಲ್ಯಗಳು ಹಾಗೂ ದೇಶಭಕ್ತಿ ಅಡಕವಾಗಿರಬೇಕು. ಈ ಹಿನ್ನೆಲೆಯಲ್ಲಿ ಭ್ರೂಣ ಹೊಟ್ಟೆಯಲ್ಲಿದ್ದಾಗ ಅದಕ್ಕೆ ವೈದ್ಯಕೀಯ ಆರೈಕೆ ಎಷ್ಟು ಮುಖ್ಯವೋ, ಸಂಪ್ರದಾಯ-ಸಂಸ್ಕಾರವನ್ನು ಅರುಹುವುದೂ ಅಷ್ಟೇ ಮಹತ್ವದ್ದು ಎಂಬ ಕಾರಣಕ್ಕೆ ಹೀಗೆ ಗರ್ಭ ಸಂಸ್ಕಾರ ಅಭಿಯಾನ ನಡೆಸಲಾಗುತ್ತಿದೆ. ಇಲ್ಲಿ ವೈಜ್ಞಾನಿಕ ದೃಷ್ಟಿಕೋನವೂ ಇದೆ ಎಂದು ನ್ಯಾಸ್​ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: Garbha Sanskar: ‘ರಾಷ್ಟ್ರಭಕ್ತ’ ಮಕ್ಕಳ ಜನನಕ್ಕಾಗಿ ಆರೆಸ್ಸೆಸ್ ‘ಗರ್ಭ ಸಂಸ್ಕಾರ’ ಅಭಿಯಾನ, ಭಾನುವಾರ ಚಾಲನೆ

ತೆಲಂಗಾಣದಲ್ಲಿ ಆಯೋಜಿಸಲಾಗಿದ್ದ ಗರ್ಭ ಸಂಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅಲ್ಲಿನ ರಾಜ್ಯಪಾಲೆ ತಮಿಳಿಸಾಯಿ ಸೌಂದರರಾಜನ್‌, ‘ಗರ್ಭ ಧರಿಸಿದ ಸಂದರ್ಭದಲ್ಲಿ ರಾಮಾಯಣ, ಮಹಾಭಾರತ ಮತ್ತು ಇತರ ದೇವರ ಕತೆಗಳು, ಒಳ್ಳೊಳ್ಳೆ ವಿಚಾರಗಳನ್ನು ಓದುವ ಮಹಿಳೆಯರನ್ನು ನಾವು ಹಳ್ಳಿಗಳಲ್ಲಿ ಇಂದಿಗೂ ಕಾಣುತ್ತೇವೆ. ಗರ್ಭಿಣಿಯಾಗಿದ್ದಾಗ ಹೀಗೆ ರಾಮಾಯಣ, ಮಹಾಭಾರತ, ಭಗವದ್ಗೀತೆಗಳಂಥ ಪುಸ್ತಕಗಳನ್ನು ಓದುವುದರಿಂದ ಹುಟ್ಟುವ ಮಗುವಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಅವರಲ್ಲಿ ಇದೆ. ಇದನ್ನು ಎಲ್ಲರೂ ಪಾಲಿಸಬೇಕು. ತಮಿಳುನಾಡಿನಲ್ಲೂ ಎಲ್ಲ ಕಡೆ ಈ ಸಂಪ್ರದಾಯ ಪಾಲನೆಯಾಗಬೇಕು. ರಾಮಾಯಣದ ಸುಂದರಕಾಂಡಂ ಅಧ್ಯಾಯವನ್ನು ಓದಬೇಕು. ಇದು ಹೊಟ್ಟೆಯಲ್ಲಿರುವ ಮಗುವಿಗೆ ತುಂಬ ಒಳ್ಳೆಯದು ಎಂದು ಹೇಳಿದರು.

ರಾಮಾಯಣದಲ್ಲೇ ಅತ್ಯಂತ ಸುಂದರವಾದ ಅಧ್ಯಾಯ ಎನ್ನಿಸಿದ ಸುಂದರಕಾಂಡವು ಆಂಜನೇಯ ಮತ್ತು ಸೀತಾಮಾತೆಯ ಸಂಭಾಷಣೆಯನ್ನು ಒಳಗೊಂಡಿದೆ. ಭಗವಾನ್ ಹನುಮಂತ ಶ್ರೀರಾಮನ ಮೇಲಿಟ್ಟ ಭಕ್ತಿ, ಅವನ ನಿಸ್ವಾರ್ಥತತೆ, ಶಕ್ತಿಯ ಚಿತ್ರಣವನ್ನು ಕಟ್ಟಿಕೊಡುತ್ತದೆ. ಅಂಥ ಸುಂದರಕಾಂಡ, ರಾಮಾಯಣ ಮತ್ತಿತರ ಧಾರ್ಮಿಕ ವಿಷಯಗಳನ್ನು ಗರ್ಭಿಣಿಯರು ಓದುವುದರಿಂದ ಆ ಸಮಯದಲ್ಲಿ ಅವರನ್ನು ಕಾಡುವ ಸಮಸ್ಯೆಗಳು ದೂರವಾಗುತ್ತವೆ ಎಂಬುದು ಅನೇಕರ ಅಭಿಮತವಾಗಿದೆ. ಅದನ್ನೇ ಈಗ ಗರ್ಭ ಸಂಸ್ಕಾರ ಕಾರ್ಯಕ್ರಮದಲ್ಲೂ ತಿಳಿಸಲಾಗುತ್ತಿದೆ. ಹಾಗೇ, ಯೋಗಾಭ್ಯಾಸ ಮಾಡುವುದರಿಂದಲೂ ತಾಯಿ-ಮಗು ಇಬ್ಬರೂ ಆರೋಗ್ಯವಾಗಿ ಇರುತ್ತಾರೆ ಎಂಬ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

Exit mobile version