Site icon Vistara News

ಬಂಡಾಯ ಶಾಸಕರು ಶಿವಸೇನೆ ಬಿಟ್ಟು ಎಷ್ಟು ದೂರ ಓಡುತ್ತಾರೆ ನೋಡುತ್ತೇನೆ; ಸಿಎಂ ಉದ್ಧವ್‌ ಠಾಕ್ರೆ

Uddhav Thackeray

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮೈತ್ರಿ ಪಕ್ಷಗಳನ್ನು ಹೆಚ್ಚೆಚ್ಚು ಓಲೈಸಲು ಹೋಗಿ, ತಮ್ಮದೇ ಪಕ್ಷದ ಶಾಸಕರು-ಸಂಸದರಿಂದ ಬಲವಾದ ಪೆಟ್ಟು ತಿನ್ನುತ್ತಿದ್ದಾರೆ. ಅವರ ಸರ್ಕಾರವೀಗ ವಿಧಾನಸಭೆಯಲ್ಲಿ ಅಲ್ಪಮತಕ್ಕೆ ಇಳಿದಿದೆ. ಯಾವಾಗ ಬೇಕಾದರೂ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿರುವ ಉದ್ಧವ್‌ ಠಾಕ್ರೆ, ಇಂದು ಮಧ್ಯಾಹ್ನ ತಮ್ಮ ಪಕ್ಷದ ಕೆಲವೇ ಮುಖಂಡರೊಂದಿಗೆ ವರ್ಚ್ಯುವಲ್‌ ಆಗಿ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಉದ್ಧವ್‌ ಠಾಕ್ರೆ, ʼನಮ್ಮ ಶಿವಸೇನೆ ಪಕ್ಷವನ್ನು ಒಡೆಯಲೆಂದೇ ಶಾಸಕರು ಬಂಡಾಯವೆದ್ದು ಹೋಗಿದ್ದಾರೆ. ಅವರ ಬಗ್ಗೆ ಯೋಚನೆ ಮಾಡುವುದಿಲ್ಲ ಮತ್ತು ಅವರಿಗೆ ಕೆಟ್ಟದ್ದನ್ನೂ ಬಯಸುವುದಿಲ್ಲʼ ಎಂದು ಹೇಳಿದ್ದಾರೆ.

ʼಶಿವಸೇನೆ ತೊರೆಯುವುದಕ್ಕಿಂತ ಸಾಯುವುದೇ ಲೇಸು ಎಂದು ದೊಡ್ಡದೊಡ್ಡ ಮಾತುಗಳನ್ನಾಡುತ್ತಿದ್ದವರೆಲ್ಲ ಇವತ್ತು ಓಡಿ ಹೋಗಿದ್ದಾರೆ. ಹೀಗೆ ಹೋದವರೆಲ್ಲ, ಶಿವಸೇನೆ ಮತ್ತು ಠಾಕ್ರೆ ಹೆಸರನ್ನು ಬಳಸದೆ ಎಷ್ಟು ದೂರ ಓಡಬಹುದು? ನಾನೂ ನೋಡುತ್ತೇನೆʼ ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ. ʼನೀವು ಶಿವಸೇನೆ ಎಂಬ ಮರದ ಹೂವನ್ನು ಕೀಳಬಹುದು, ಹಣ್ಣನ್ನೂ ಕೊಯ್ದುಕೊಳ್ಳಬಹುದು. ಅಷ್ಟೇ ಏಕೆ, ಕಾಂಡಗಳನ್ನೂ ಕತ್ತರಿಸಿಕೊಳ್ಳಬಹುದು. ಆದರೆ ಇದರ ಬೇರನ್ನು ಕೀಳಲು ಎಂದಿಗೂ ಸಾಧ್ಯವಿಲ್ಲʼ ಎಂದಿದ್ದಾರೆ.

ಏಕನಾಥ್‌ ಶಿಂಧೆ, ಆದಿತ್ಯ ಠಾಕ್ರೆ ವಿರುದ್ಧ ಅಸಮಾಧಾನಗೊಂಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಉದ್ಧವ್‌ ಠಾಕ್ರೆ, ʼಆದಿತ್ಯ ಠಾಕ್ರೆ ಸಚಿವನಾದ ಬಗ್ಗೆ ಏಕನಾಥ್‌ ಶಿಂಧೆ ಯಾಕೆ ಅಸಮಾಧಾನಗೊಳ್ಳಬೇಕು? ಅವರ ಪುತ್ರನೂ ಸಂಸದನೇ ಅಲ್ಲವೇ?. ಏಕನಾಥ್‌ ಶಿಂಧೆಗಾಗಿ ನಾನು ಎಲ್ಲವನ್ನೂ ಮಾಡಿದ್ದೇನೆ. ನನ್ನ ಕೈಯಲ್ಲಿದ್ದ ಖಾತೆಯನ್ನು ಬಿಟ್ಟುಕೊಟ್ಟಿದ್ದೇನೆ. ಆದರೆ ಆತನೀಗ ನನ್ನ ವಿರುದ್ಧ ಹಲವು ಅಪವಾದಗಳನ್ನು ಮಾಡುತ್ತಿದ್ದಾನೆʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೇ, ನನಗೆ ಅಧಿಕಾರ ದಾಹ ಇಲ್ಲ. ಹೀಗಾಗಿ ನಾನು ಈ ಆಟದಲ್ಲಿ ಇಲ್ಲ. ಬಿಜೆಪಿ ನಮಗೆ ಬೆನ್ನ ಹಿಂದಿನಿಂದ ಚೂರಿ ಹಾಕಿತು. ಹಾಗಾಗಿ ಅದರೊಂದಿಗೆ ಇನ್ನು ಮತ್ತೆ ಮೈತ್ರಿ ಸಾಧ್ಯವೇ ಇಲ್ಲʼ ಎಂದಿದ್ದಾರೆ. ಅತ್ತ ರೆಸಾರ್ಟ್‌ನಲ್ಲಿ ಏಕನಾಥ್‌ ಶಿಂಧೆ ತಮಗೆ 50ಕ್ಕೂ ಹೆಚ್ಚು ಬೆಂಬಲಿಗರ ಬಲವಿದೆ ಎನ್ನುತ್ತಿದ್ದಾರೆ. ರಾಜಕೀಯ ಬಿಕ್ಕಟ್ಟು ಶುರುವಾಗಿ ಐದು ದಿನಗಳೇ ಕಳೆದು ಹೋದರೂ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣುತ್ತಿಲ್ಲ.

ಇದನ್ನೂ ಓದಿ: ಮಿತ್ರಕೂಟದಿಂದ ಹೊರಬರಲು ಸಿದ್ಧ ಎಂದ ಉದ್ಧವ್‌ ಠಾಕ್ರೆ ಬಣ, ಮಹಾ ಸರಕಾರ ಪತನಕ್ಕೆ ಕ್ಷಣಗಣನೆ

Exit mobile version