ನವದೆಹಲಿ: ಭಾರತೀಯ ರೈಲ್ವೆ ಮ್ಯಾನೇಜ್‌ಮೆಂಟ್ ಸರ್ವೀಸ್(IRMS)ಗೆ ಅಧಿಕಾರಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೇಂದ್ರ ಲೋಕಸೇವಾ ಆಯೋಗ(UPSC) ಮೂಲಕವೇ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಗುರುವಾರ ಹೇಳಿದೆ.
ಯುಪಿಎಸ್‌ಸಿ ಮತ್ತು ಸಿಬ್ಬಂದಿ ಇಲಾಖೆಯೊಂದಿಗೆ ಸಮಾಲೋಚಿಸಿ ರೈಲ್ವೆ ಸಚಿವಾಲಯವು ಭಾರತೀಯ ರೈಲ್ವೆ ನಿರ್ವಹಣಾ ಸೇವೆ(IRMS)ಗೆ ನೇಮಕಾತಿಯನ್ನು 2023 ಸಾಲಿನಲ್ಲಿ ಯುಪಿಎಸ್‌ಸಿ ನಡೆಸುವ ನಾಗರಿಕ ಸೇವೆಗಳ ಪರೀಕ್ಷೆಯ ಮೂಲಕ ಮಾಡಲಾಗುತ್ತದೆ ಎಂದು ನಿರ್ಧರಿಸಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಹಿಂದಿನ ಆದೇಶದಲ್ಲಿ ರೈಲ್ವೇ ಸಚಿವಾಲಯವು 2023ರಿಂದ ನಡೆಸಲಾಗುವ ಭಾರತೀಯ ರೈಲ್ವೆ ನಿರ್ವಹಣಾ ಸೇವೆಗೆ ನೇಮಕಾತಿಯನ್ನು ಯುಪಿಎಸ್‌ಸಿ ವಿಶೇಷವಾಗಿ ವಿನ್ಯಾಸಗೊಳಿಸಿದ ಪರೀಕ್ಷೆ ಮೂಲಕ ಮಾಡಲಾಗುತ್ತದೆ ಎಂದು ಹೇಳಿತ್ತು.
ಇದನ್ನೂ ಓದಿ: Union Budget 2023: ರೈಲ್ವೆಗೆ 2.41 ಲಕ್ಷ ಕೋಟಿ ರೂ. ಹಂಚಿಕೆ, ಯಾವುದಕ್ಕೆಲ್ಲ ವೆಚ್ಚ?
ಐಆರ್‌ಎಂಎಸ್‌ಗೆ ಎರಡು ಹಂತದ ಪರೀಕ್ಷೆ ನಡೆಸಲಾಗುತ್ತದೆ. ಪ್ರಾಥಮಿಕ ಸ್ಕ್ರೀನಿಂಗ್ ಪರೀಕ್ಷೆ, ನಂತರ ಮುಖ್ಯ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಎಂದು ರೈಲ್ವೆ ಇಲಾಖೆ ಸಚಿವಾಲಯವು ತಿಳಿಸಿದೆ. ಡಿಸೆಂಬರ್‌ನಲ್ಲಿ ಪ್ರಕಟವಾದ ಮೂಲ ಅಧಿಸೂಚನೆಯ ಪ್ರಕಾರ, 150 ಹೊಸ ಅಧಿಕಾರಿಗಳ ಮೊದಲ ಬ್ಯಾಚ್ ಅನ್ನು 2023ರಲ್ಲಿ ಯುಪಿಎಸ್‌ಸಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.