ಖ್ಯಾತ ಉದ್ಯಮಿ ರತನ್ ಟಾಟಾ ಸರಳತೆ, ವಿನಮ್ರತೆಗೆ ಹೆಸರಾದವರು. ಅಷ್ಟೇ ಅಲ್ಲ, ರತನ್ ಟಾಟಾ ಅವರು ಇನ್ನೊಬ್ಬರನ್ನು ಅದೆಷ್ಟು ಆದರಣೀಯವಾಗಿ, ಔದಾರ್ಯದಿಂದ ನೋಡುತ್ತಾರೆ ಎಂಬುದನ್ನು ಹಲವು ಸಂದರ್ಭಗಳಲ್ಲಿ ನಾವು ನೋಡಿದ್ದೇವೆ. ಹೀಗೆ ದಿಗ್ಗಜ ಉದ್ಯಮಿಯ ಔದಾರ್ಯ-ಸರಳತೆಯನ್ನು ಬಹಳ ಹತ್ತಿರದಿಂದ ನೋಡಿ, ಅವರಿಂದ ನೆರವು ಪಡೆದವರಲ್ಲಿ ರೆಪೋಸ್ ಇಂಧನ ವಿತರಣಾ ಕಂಪನಿಯ ಸಂಸ್ಥಾಪಕರಾದ ಅದಿತಿ ಭೋಸಲೆ ವಾಲುಂಜ್ ಮತ್ತು ಚೇತನ್ ವಾಲುಂಜ್ ದಂಪತಿಯೂ ಒಬ್ಬರು.
ರೆಪೋಸ್ ಸ್ಟಾರ್ಟ್ಅಪ್ನ್ನು ಅವರು 2017ರಲ್ಲಿ ಪ್ರಾರಂಭ ಮಾಡುವ ಮೊದಲು ತಮಗೊಂದು ಸೂಕ್ತ ಮಾರ್ಗದರ್ಶನ ಬೇಕು ಮತ್ತು ಅದನ್ನು ಉದ್ಯಮಿ ರತನ್ ಟಾಟಾ ಅವರಿಂದಲೇ ಪಡೆಯಬೇಕು ಎಂದು ಬಯಸಿದ್ದರು. ಹೊಸ ಉದ್ಯಮ ಪ್ರಾರಂಭಿಸಲು ಹೊರಟ ಅವರು ಒಂದಷ್ಟು ರೂಪುರೇಷೆಗಳನ್ನು ತಯಾರಿಸಿಕೊಂಡು, ಅದನ್ನು ರತನ್ ಟಾಟಾ ಎದುರು ಇಡಬೇಕು ಎಂದು ನಿರ್ಧರಿಸಿದ್ದರು. ಹೇಗಾದರೂ ಸರಿ ರತನ್ ಟಾಟಾರನ್ನು ಭೇಟಿಯಾಗಲೇಬೇಕು ಎಂದುಕೊಂಡ ಅವರಿಗೆ ಅದು ಸುಲಭದ ವಿಷಯವಾಗಿರಲಿಲ್ಲ. ಅಂತಿಮವಾಗಿ ಅವರು ರತನ್ ಟಾಟಾರನ್ನು ಭೇಟಿಯಾಗಿದ್ದು ಹೇಗೆ? ಅವರ ರೆಪೋಸ್ ಉದ್ಯಮಕ್ಕೆ ರತನ್ ಟಾಟಾ ಬೆಂಬಲ ಕೊಟ್ಟಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ
‘ನಾವು ನಮ್ಮ ಉದ್ಯಮ ಪ್ರಾರಂಭಿಸುವ ಮೊದಲು ರತನ್ ಟಾಟಾರನ್ನು ಭೇಟಿಯಾಗಲು ನಿರ್ಧರಿಸಿದ್ದೆವು. ಆದರೆ ಅವರು ಅಷ್ಟು ಸುಲಭಕ್ಕೆ ಸಿಗುವವರು ಆಗಿರಲಿಲ್ಲ. ಅದೂ ನಾವು ಉದ್ಯಮ ಶುರುಮಾಡುವಾಗ ಅಂದರೆ, 2016-17ರವರೆಗೆ ಟಾಟಾ ಗ್ರೂಪ್ನ ಮಧ್ಯಂತರ ಅಧ್ಯಕ್ಷರೂ ಆಗಿದ್ದರು. ಹೀಗಾಗಿ ಅವರಿಗೆ ವಿಪರೀತ ಎನ್ನುವಷ್ಟು ಕೆಲಸವಿತ್ತು. ಅಂಥ ಟೈಟ್ ಶೆಡ್ಯೂಲ್ ಮಧ್ಯೆ ಅವರನ್ನು ಭೇಟಿಯಾಗುವುದು ಸುಲಭ ಆಗಿರಲಿಲ್ಲ. ಆದರೆ ನಾವು ಯಾವುದೇ ಬಿಸಿನೆಸ್ ಶಾಲೆಗಳಲ್ಲಿ ಉದ್ಯಮಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ಕಲಿತವರು ಆಗಿಲ್ಲದ ಕಾರಣ, ರತನ್ ಟಾಟಾ ಮಾರ್ಗದರ್ಶನ ಅತ್ಯಗತ್ಯವಾಗಿತ್ತು. ಹೀಗಾಗಿ ಮೊಟ್ಟಮೊದಲು ನಮ್ಮ ಕನಸು, ಯೋಜನೆ ಬಗ್ಗೆ ಒಂದು 3ಡಿ ಪ್ರಸ್ತುತಿ ತಯಾರಿಸಿದೆವು. ಅದಾದ ಬಳಿಕ ರತನ್ ಟಾಟಾ ಅವರಿಗೆ ಕೈಬರಹದ ಪತ್ರ ಕಳಿಸಿದೆವು. ಅಷ್ಟೇ ಅಲ್ಲ, ರತನ್ ಟಾಟಾ ಅವರನ್ನು ಪ್ರತಿನಿತ್ಯ ನೋಡುವ, ಅವರೊಂದಿಗೆ ಒಡನಾಟ ಇರುವ ವ್ಯಕ್ತಿಗಳನ್ನೂ ಭೇಟಿಯಾಗಿ ನಮ್ಮ ಇಂಗಿತ ತಿಳಿಸಿದೆವು. ಒಂದು ದಿನವಂತೂ ರತನ್ ಟಾಟಾ ಮನೆಗೇ ಹೋಗಿ 12 ತಾಸು ಕಾದಿದ್ದೇವೆ’ ಎಂದು ಹಳೇ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ ಅದಿತಿ ಅದಿತಿ ಭೋಸಲೆ ವಾಲುಂಜ್.
‘ಅಂದು 12 ತಾಸು ಕಾದರೂ ರತನ್ ಟಾಟಾ ಸಿಗದೆ ಇದ್ದಾಗ ನಾವು ವಾಪಸ್ ನಮ್ಮ ಹೋಟೆಲ್ ಕೋಣೆಗೆ ಬಂದೆವು. ಹೀಗೆ ಬಂದು ಒಂದು ತಾಸಿನಲ್ಲಿ ಸ್ವತಃ ರತನ್ ಟಾಟಾ ಅವರೇ ನನಗೆ ಕರೆ ಮಾಡಿದ್ದರು. ‘ನಾನು ಅದಿತಿ ಜತೆ ಮಾತನಾಡಬಹದೇ? ನಾನು ರತನ್ ಟಾಟಾ ಮಾತಾಡುತ್ತಿದ್ದೇನೆ. ನಿಮ್ಮ ಪತ್ರ ಸಿಕ್ಕಿತು. ನಾವು ಭೇಟಿಯಾಗೋಣ?’ ಎಂದು ಹೇಳಿದರು. ಅದೆಷ್ಟು ಸೌಮ್ಯವಾಗಿ ಮಾತನಾಡಿದ್ದರು ಎಂದರೆ, ಅಷ್ಟು ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ, ನೇರವಾಗಿ ನನಗೇ ಕರೆ ಮಾಡಿದ್ದು ತುಂಬ ಅಚ್ಚರಿ ತಂದಿತ್ತು. ಅವರ ಸರಳತೆ, ಔದಾರ್ಯಕ್ಕೆ ಸೋತಿದ್ದೆವು’ ಎಂದು ಅದಿತಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Ratan Tata | 25 ವರ್ಷಗಳ ಹಿಂದೆ ಬಿಡುಗಡೆ ಮಾಡಿದ ವಿಶೇಷ ಕಾರನ್ನು ಸ್ಮರಿಸಿಕೊಂಡ ರತನ್ ಟಾಟಾ, ಯಾವ ಕಾರು ಅದು?
ಹೀಗೆ ಭೇಟಿಯಾಗಿ ರತನ್ ಟಾಟಾ ಜತೆ ಮಾತನಾಡಿ, ತಮ್ಮ ಕನಸಿನ ಬಗ್ಗೆ ಹಂಚಿಕೊಂಡ ಭೋಸಲೆ ದಂಪತಿಗೆ ಸಂಪೂರ್ಣವಾಗಿ ಅವರ ಬೆಂಬಲ ದೊರೆಯಿತು. ರತನ್ ಟಾಟಾ ಎರಡು ಬಾರಿ ರೆಪೋಸ್ ಇಂಧನ ವಿತರಣಾ ಕಂಪನಿಯಲ್ಲಿ ಹೂಡಿಕೆ ಮಾಡಿದರು. ಈಗ ರೆಪೋಸ್ ಕಂಪನಿ ದೇಶಾದ್ಯಂತ 188 ನಗರಗಳಲ್ಲಿ ಇದೆ. ವಾರ್ಷಿಕ 180 ಕೋಟಿ ರೂಪಾಯಿ ಆದಾಯ ಪಡೆಯುತ್ತಿದೆ. ಇತ್ತೀಚೆಗೆ ಅಂದರೆ 2022ರ ಮೇ ತಿಂಗಳಲ್ಲಿ ಮತ್ತೆ ಟಾಟಾ ಗ್ರೂಪ್ ಈ ರೆಪೋಸ್ನಲ್ಲಿ 56 ಕೋಟಿ ರೂಪಾಯಿ ಹೂಡಿಕೆ ಮಾಡಿದೆ.
‘ನಾವು ನಮ್ಮ ಮೊದಲ ಹೂಡಿಕೆದಾರರನ್ನಾಗಿ ರತನ್ ಟಾಟಾ ಅವರನ್ನು ಪಡೆದಿದ್ದು ನಿಜಕ್ಕೂ ಅದೃಷ್ಟ. ಕಳೆದ ಹಣಕಾಸು ವರ್ಷದಲ್ಲಿ ನಾವು ವಾರ್ಷಿಕ 65 ಕೋಟಿ ರೂಪಾಯಿ ವಹಿವಾಟು ನಡೆಸಿದ್ದೇವೆ. ಈ ಸಲ ಅದರ ಎರಡು ಪಟ್ಟು ಹೆಚ್ಚಾಗಿದೆ. ಅದನ್ನು 300 ಕೋಟಿ ರೂಪಾಯಿಗೆ ಏರಿಸುವ ಗುರಿ ಹೊಂದಿದ್ದೇವೆ’ ಎಂದು ತಿಳಿಸಿದ್ದಾರೆ.