ನವ ದೆಹಲಿ: 74ನೇ ಗಣರಾಜ್ಯೋತ್ಸವ (Republic Day 2023)ನಿಮಿತ್ತ ದೆಹಲಿ ಕರ್ತವ್ಯ ಪಥದಲ್ಲಿ ವೈಭವಯುತ ಪಥಸಂಚಲನ ನಡೆಯುತ್ತಿದೆ. ಬೆಳಗ್ಗೆ 10.30ರ ಹೊತ್ತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದರು. ಅದರ ಬೆನ್ನಲ್ಲೇ ಪಥಸಂಚಲನ ಪ್ರಾರಂಭವಾಯಿತು. ಭಾರತದ ಮಿಲಟರಿ ಸಾಮರ್ಥ್ಯ ತೋರಿಸುವ ಈ ಪರೇಡ್ನಲ್ಲಿ ಮೊದಲಿಗೆ ಪರಮ ವೀರ ಚಕ್ರ ಮತ್ತು ಅಶೋಕ ಚಕ್ರ ಪುರಸ್ಕೃತರು ಪರೇಡ್ ನಡೆಸಿ, ರಾಷ್ಟ್ರಪತಿಯವರಿಗೆ ಗೌರವ ವಂದನೆ ಸಲ್ಲಿಸಿದರು. ಹಾಗೇ, ಇದೇ ಮೊದಲ ಬಾರಿಗೆ ಈಜಿಪ್ಟ್ ಸೇನಾ ತುಕಡಿಯೊಂದು ದೆಹಲಿ ಕರ್ತವ್ಯ ಪಥದಲ್ಲಿ ಪರೇಡ್ ನಡೆಸಿದ್ದು, ಇದರ ನೇತೃತ್ವವನ್ನು ಈಜಿಪ್ಟ್ ಸೇನಾ ಕರ್ನಲ್ ಕರ್ನಲ್ ಮಹಮೂದ್ ಮೊಹಮ್ಮದ್ ಅಬ್ದೆಲ್ ಫತ್ತಾಹ್ ಎಲ್ ಖರಾಸಾವಿ ವಹಿಸಿದ್ದರು.
ಇದಾದ ಬಳಿಕ ಕ್ಯಾಪ್ಟನ್ ರೈಜಾದಾ ಶೌರ್ಯ ಬಾಲಿ ನೇತೃತ್ವದಲ್ಲಿ 61ನೇ ಅಶ್ವದಳದ ಪಥಸಂಚಲನ ನಡೆಯಿತು. ಈ 61ನೇ ಅಶ್ವದಳ ವಿಶ್ವದ ಏಕೈಕ ಸಕ್ರಿಯ ಅಶ್ವದಳ ರೆಜಿಮೆಂಟ್ ಎನ್ನಿಸಿದೆ. ಈ ದಳ ‘ಅಶ್ವಶಕ್ತಿ ಯಶೋಬಲ’ ಎಂಬ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅದಾದ ಬಳಿಕ ಕ್ಯಾಪ್ಟನ್ ಅಮನ್ಜೀತ್ ಸಿಂಗ್ ನೇತೃತ್ವದಲ್ಲಿ 75 ಸಶಸ್ತ್ರ ರೆಜಿಮೆಂಟ್ನ ಮುಖ್ಯ ಯುದ್ಧ ಟ್ಯಾಂಕ್ ‘ಅರ್ಜುನ್’ ಪರೇಡ್ ನಡೆಯಿತು.
ಅಶ್ವದಳ, ಅರ್ಜುನ್ ಯುದ್ಧ ಟ್ಯಾಂಕ್ ಬೆನ್ನಲ್ಲೇ, ಕರ್ತವ್ಯಪಥದಲ್ಲಿ ಸಾಗಿದ್ದು ಭಾರತೀಯ ಸೇನೆಯ 17ನೇ ಯಾಂತ್ರೀಕೃತ ಪದಾತಿ ದಳದ ನಾಗ್ ಕ್ಷಿಪಣಿ. ಇದನ್ನು ಮುನ್ನಡೆಸಿದ ಲೆಫ್ಟಿನೆಂಟ್ ಸಿದ್ಧಾರ್ಥ್ ತ್ಯಾಗಿ ರಾಷ್ಟ್ರಪತಿ ಮುರ್ಮು ಅವರಿಗೆ ಗೌರವ ಸಲ್ಲಿಸಿದರು. ಅದಾದ ಬಳಿಕ, ಲಡಾಖ್, ಸಿಕ್ಕಿಂ, ಅರುಣಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗಾಗಿಯೇ ವಿನ್ಯಾಸಗೊಳಿಸಲಾದ ಕ್ಷಿಪ್ರ ಪ್ರತಿಕ್ರಿಯಾ ಫೈಟಿಂಗ್ ವಾಹನ (Quick (Reaction Fighting Vehicle)ದ ಪರೇಡ್ ನಡೆಯಿತು. ಸಿಕ್ಕಿಂ ಸ್ಕೌಟ್ಸ್ ರೆಜಿಮೆಂಟ್ಗೆ ಸೇರಿದ ಈ ವಾಹನವನ್ನು ಕ್ಯಾಪ್ಟನ್ ನವೀನ್ ಧತ್ತೇರ್ವಾಲ್ ಮುನ್ನಡೆಸಿದರು.
K9-ವಜ್ರ-T (ಸ್ವಯಂ ಚಾಲಿತ) ಗನ್ ಸಿಸ್ಟಮ್ ಪ್ರದರ್ಶನದ ಬಳಿಕ, 861 ಕ್ಷಿಪಣಿ ರೆಜಿಮೆಂಟ್ಗೆ ಸೇರಿದ ಬ್ರಹ್ಮೋಸ್ ಕ್ಷಿಪಣಿಯ ಉಪಕರಣಗಳನ್ನು ಪ್ರದರ್ಶಿಸುವ ಪರೇಡ್ ನಡೆಯಿತು. ನಂತರ, ಅಮೃತ್ಸರ ವಾಯುನೆಲೆಗೆ ಸೇರಿದ 27ನೇ ವಾಯು ರಕ್ಷಣಾ ಕ್ಷಿಪಣಿ ರೆಜಿಮೆಂಟ್ನ ಆಕಾಶ್ ವೆಪನ್ ವ್ಯವಸ್ಥೆ ಪ್ರದರ್ಶನದ ಪಥಸಂಚಲನವನ್ನು ಕ್ಯಾಪ್ಟನ್ ಸುನಿಲ್ ದಶರಥೆ ಮತ್ತು 512 ಲೈಟ್ ಎಡಿ ಮಿಸೆಲ್ ರೆಜಿಮೆಂಟ್ನ ಲೆಫ್ಟಿನೆಂಟ್ ಚೇತನ್ ಶರ್ಮಾ ಮುನ್ನಡೆಸಿದರು.
ಇನ್ನುಳಿದಂತೆ ಭಾರತೀಯ ನೌಕಾದಳದ 80 ಸಂಗೀತಗಾರರು, ನೌಕಾಪಡೆ ಹಾಡು ‘ಜೈ ಭಾರತಿ’ಯನ್ನು ನುಡಿಸುತ್ತ ಕರ್ತವ್ಯಪಥದಲ್ಲಿ ಸಾಗಿದರು. ಬಳಿಕ ನೌಕಾಪಡೆಯ 144 ಯುವ ನಾಯಕರನ್ನು ಒಳಗೊಂಡ ತುಕಡಿ, ಲೆಫ್ಟಿನೆಂಟ್ ದಿಶಾ ಅಮೃತ್ ನೇತೃತ್ವದಲ್ಲಿ ಪರೇಡ್ ನಡೆಸಿತು. ಈ ತುಕಡಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 3 ಮಹಿಳಾ ಮತ್ತು 6 ಪುರುಷ ಅಗ್ನಿವೀರರನ್ನು ಒಳಗೊಂಡಿದೆ. ನಂತರ ಕರ್ತವ್ಯ ಪಥದಲ್ಲಿ ಸಾಗಿದ್ದು, ಅಖಿಲ ಮಹಿಳಾ ಕೇಂದ್ರೀಯ ಮೀಸಲು ಪೊಲೀಸ್ ಪಡೆ ತುಕಡಿ. ವಾಯುಪಡೆಯ 144 ಯೋಧರು, ನಾಲ್ವರು ಅಧಿಕಾರಿಗಳನ್ನು ಒಳಗೊಂಡ ಕವಾಯತು ತಂಡ ಸ್ಕ್ವಾಡ್ರನ್ ಲೀಡರ್ ಸಿಂಧು ರೆಡ್ಡಿ ನೇತೃತ್ವದಲ್ಲಿ ಪರೇಡ್ ನಡೆಸಿತು. ಇನ್ನುಳಿದಂತೆ ಎನ್ಸಿಸಿ ಬಾಲಕ/ಬಾಲಕಿಯರ ತಂಡ, ಅಸ್ಸಾಂ ರೈಫಲ್ಸ್, ಒಂಟೆದಳ, ಗೋರ್ಖಾ ಬ್ರಿಗೇಡ್, ಬಿಹಾರ್ ರೆಜಿಮೆಂಟ್ ಸೇರಿ ವಿವಿಧ ಸೇನಾ ವಿಭಾಗದ ಯೋಧರು, ಸೇನಾ ಉಪಕರಣಗಳ ಪ್ರದರ್ಶನ ಮಾಡುತ್ತ ಪರೇಡ್ ನಡೆಸಿದ್ದಾರೆ.
ಇದನ್ನೂ ಓದಿ: Republic Day 2023: 74ನೇ ಗಣರಾಜ್ಯೋತ್ಸವ; ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಧ್ವಜಾರೋಹಣ