ನವ ದೆಹಲಿ: 74ನೇ ಗಣರಾಜ್ಯೋತ್ಸವ (Republic Day 2023) ನಿಮಿತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಇಂದು ಸಂಜೆ 7ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ದ್ರೌಪದಿ ಮುರ್ಮು ಅವರ ಭಾಷಣ ಆಲ್ ಇಂಡಿಯಾ ರೇಡಿಯೋ (AIR-ಆಕಾಶವಾಣಿ) ಮತ್ತು ದೂರದರ್ಶನ ಜಾಲದ ಎಲ್ಲ ಚಾನಲ್ಗಳಲ್ಲೂ ಪ್ರಸಾರವಾಗಲಿದೆ. ರಾಷ್ಟ್ರಪತಿಯವರು ಹಿಂದಿಯಲ್ಲಿ ಭಾಷಣ ಮಾಡಲಿದ್ದು, ಅದರ ಇಂಗ್ಲಿಷ್ ಆವೃತ್ತಿಯೂ ಲಭ್ಯವಾಗಲಿದೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆ ಬಿಡುಗಡೆ ಮಾಡಿದೆ.
ರಾಷ್ಟ್ರಪತಿ ಭಾಷಣವನ್ನು ನೀವು ಪ್ರಾದೇಶಿಕ ಭಾಷೆಯಲ್ಲೂ ಕೇಳಬಹುದಾಗಿದೆ. 7ಗಂಟೆಗೆ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಹಿಂದಿ/ಇಂಗ್ಲಿಷ್ ಆವೃತ್ತಿಯಲ್ಲಿ ಪ್ರಸಾರವಾಗುವ ಭಾಷಣವನ್ನು ಬಳಿಕ ಸಂಜೆ 9.30ಕ್ಕೆ ದೂರದರ್ಶನದ ಪ್ರಾದೇಶಿಕ ಚಾನಲ್ಗಳು ಆಯಾ ಪ್ರಾದೇಶಿಕ ಭಾಷೆಯಲ್ಲಿ ಬಿತ್ತರಿಸಲಿವೆ ಎಂದೂ ರಾಷ್ಟ್ರಪತಿ ಭವನ ಹೇಳಿದೆ.
ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಸಂಭ್ರಮಕ್ಕೆ ಭರ್ಜರಿ ಸಿದ್ಧತೆ ಈಗಾಗಲೇ ಶುರುವಾಗಿದೆ. ಹಾಗೇ, ನಾಳೆ (ಜನವರಿ 26) ದೆಹಲಿಯ ಕರ್ತವ್ಯಪಥದಲ್ಲಿ, ಸೇನಾ ಪಡೆಗಳು ಮತ್ತು ಅರೆ ಸೇನಾ ಪಡೆಗಳ ಸಾಂಪ್ರದಾಯಿಕ-ವೈಭವಯುತ ಪರೇಡ್ ನಡೆಯಲಿದೆ. ರಾಜ್ಯ ಮತ್ತು ಕೇಂದ್ರ ಸಚಿವಾಲಯ, ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳ ಮೆರವಣಿಗೆ, ಚಿಕ್ಕಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೋಟಾರ್ ಸೈಕಲ್ ಚಮತ್ಕಾರಗಳು, ವೈಮಾನಿಕ ಹಾರಾಟದ ಕಸರತ್ತುಗಳು ನಡೆಯಲಿದ್ದು, ವಿಜಯ್ ಚೌಕ್ ಮತ್ತು ಪ್ರಧಾನಿಯವರ ಎನ್ಸಿಸಿ ರ್ಯಾಲಿಯಲ್ಲಿ ಬೀಟಿಂಗ್ ದಿ ರಿಟ್ರೀಟ್ ಸಮಾರಂಭಗಳು ಅದ್ಧೂರಿಯಾಗಿ ಜರುಗಲಿವೆ.
ಇದನ್ನೂ ಓದಿ: Republic day : ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ ಈ ಸಲದ ಗಣರಾಜ್ಯೋತ್ಸವ ಪಥಸಂಚಲನ!
ಅಂದಹಾಗೇ, ಈ ಸಲದ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಪತ್ತಾಹ್ ಎಲ್-ಸಿಸಿ ಅವರು ಮುಖ್ಯಅತಿಥಿಯಾಗಿ ಪಾಲ್ಗೊಳ್ಳುವರು. ಭಾರತ ಈ ಸಲ ಜಿ 20 ಶೃಂಗದ ಅಧ್ಯಕ್ಷತೆ ವಹಿಸಿದೆ. ಹಾಗೇ ಭಾರತದೊಂದಿಗೆ ಈಜಿಪ್ಟ್ನ ರಾಜತಾಂತ್ರಿಕ ಸಂಬಂಧ ಪ್ರಾರಂಭವಾಗಿ 75ವರ್ಷಗಳಾದ ಹಿನ್ನೆಲೆಯಲ್ಲಿ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಪತ್ತಾಹ್ ಭೇಟಿ ಅತ್ಯಂತ ಮಹತ್ವ ಪಡೆದಿದೆ.