Site icon Vistara News

Cyclone Biparjoy: ಗುಜರಾತ್​​ನಲ್ಲಿ ಬಿಪರ್​ಜಾಯ್​ ಸಂಕಷ್ಟ; ಹಸುಳೆಗೆ ಖಾಲಿ ಸಿಮೆಂಟ್​ ಚೀಲದ ಶ್ರೀರಕ್ಷೆ!

Rescue Operations In Biparjoy Cyclone hit Gujarat

#image_title

ಗುಜರಾತ್​​ನಲ್ಲಿ ಬಿಪರ್​ಜಾಯ್​ ಚಂಡಮಾರುತದ (Cyclone Biparjoy) ಅಬ್ಬರದಿಂದ ವಿಪರೀತ ಮಳೆಯಾಗುತ್ತಿದೆ. ಸಮುದ್ರದಲ್ಲಿ ದೊಡ್ಡದೊಡ್ಡ ಅಲೆಗಳು ಏಳುತ್ತಿವೆ. ಜಲಾವೃತಗೊಂಡ ಪ್ರದೇಶಗಳಿಂದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡುವ ಕೆಲಸವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿ ಚುರುಕಾಗಿ ಮಾಡುತ್ತಿದ್ದಾರೆ. ಚಂಡಮಾರುತದಿಂದ ಗುಜರಾತ್​​ನಲ್ಲಿ ಉಂಟಾಗಿರುವ ಅವ್ಯವಸ್ಥೆಗಳ ಹಲವು ಫೋಟೋ-ವಿಡಿಯೊಗಳು ಸಾಕಷ್ಟು ವೈರಲ್ ಆಗುತ್ತಿವೆ. ಹಾಗೇ, ದೇವಭೂಮಿ ದ್ವಾರಕಾ ಜಿಲ್ಲೆಯ ರೂಪನ್​ ಬಂದರ್ ಶಾಲೆ ಇರುವ ಭಾಗ ಸಂಪೂರ್ಣವಾಗಿ ಜಲಾವೃತಗೊಂಡು, ಅಲ್ಲಿಂದ ಸುಮಾರು 127 ಜನರನ್ನು ಎನ್​ಡಿಆರ್​ಎಫ್​ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ರೂಪನ್ ಬಂದರ್​ ಶಾಲೆಯಲ್ಲಿ ಸುತ್ತಲೂ ಮೊಣಕಾಲು ಮಟ್ಟದ ನೀರು ನಿಂತಿತ್ತು. ಅಲ್ಲಿಯೇ ಸುತ್ತಮುತ್ತಲೂ ಇದ್ದ ಮನೆಗಳ ಜನರೂ ಕೂಡ ಇದರಿಂದ ಪರದಾಡುತ್ತಿದ್ದರು. ಎನ್​ಡಿಆರ್​ಎಫ್ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾದರು. ವೃದ್ಧರು, ಮಕ್ಕಳು, ಹಸುಳೆ, ಸೇರಿ ಎಲ್ಲರನ್ನೂ ಪಾರುಮಾಡಿದ್ದಾರೆ. ಇದೇ ವೇಳೆ ಶಿಶುವೊಂದನ್ನು ಬಟ್ಟೆಯಲ್ಲಿ ಸುತ್ತಿ, ಬಳಿಕ ಅದಕ್ಕೆ ಮಳೆ ತಾಗಬಾರದು ಎಂಬ ಕಾರಣಕ್ಕೆ, ಮೇಲಿಂದ ಸಿಮೆಂಟ್ ಚೀಲ ಹಾಕಿ ಸುತ್ತಿ ಕರೆದುಕೊಂಡು ಬರುತ್ತಿರುವ ವಿಡಿಯೊ ವೈರಲ್ ಆಗಿದೆ. ಈ ಭಾಗದಿಂದ ಒಟ್ಟು 82 ಪುರುಷರು, 15 ಮಕ್ಕಳು, ಮೂವರು ನರ್ಸಿಂಗ್ ಸಿಬ್ಬಂದಿ, 27 ಮಹಿಳೆಯರನ್ನು ಎನ್​ಡಿಆರ್​ಎಫ್​ ಯೋಧರು ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: Cyclone Biparjoy: ಬಿಪರ್‌ಜಾಯ್‌ ಚಂಡಮಾರುತ ಭೀತಿ; ಈ ಪದದ ಅರ್ಥ ಏನು? ಮೊದಲು ಎಲ್ಲಿ ಬಳಕೆ?

ಗೃಹ ಸಚಿವ ಅಮಿತ್​ ಶಾ ವೈಮಾನಿಕ ಸಮೀಕ್ಷೆ

ಬಿಪರ್​ಜಾಯ್ ಚಂಡಮಾರುತವು ದುರ್ಬಲಗೊಂಡಿದ್ದಲ್ಲದೆ, ರಾಜಸ್ಥಾನದ ಕಡೆಗೆ ಚಲಿಸಿದೆ. ಇಂದು ಗುಜರಾತ್​ ಕರಾವಳಿಯ ಕೆಲವು ಭಾಗಗಳಲ್ಲಿ ಮತ್ತು ರಾಜಸ್ಥಾನದ ದಕ್ಷಿಣ ಕರಾವಳಿ ಪ್ರದೇಶದಲ್ಲಿ ಜೋರಾಗಿ ಗಾಳಿ ಬೀಸುವ ಜತೆಗೆ ಕಡಿಮೆಯಿಂದ ಸಾಮಾನ್ಯ ಮಳೆಯಾಗಬಹುದು. ರಾಜಸ್ಥಾನ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಬಿಪರ್​ಜಾಯ್​ ಚಂಡಮಾರುತದ ಕಾರಣಕ್ಕೆ ಗುಜರಾತ್​​ನಲ್ಲಿ ವಿಪರೀತ ಹಾನಿಯಾಗಿದ್ದು, ಇಂದು ಗೃಹ ಸಚಿವ ಅಮಿತ್ ಶಾ ಅವರು ವೈಮಾನಿಕ ಸಮೀಕ್ಷೆ ಮೂಲಕ ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಲಿದ್ದಾರೆ. ಇವರ ಜತೆಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​ ಕೂಡ ಇರಲಿದ್ದಾರೆ. ಇಂದು ಮಧ್ಯಾಹ್ನ ಅಮಿತ್ ಶಾ ಅವರು ಭುಜ್​​ನಲ್ಲಿ ಸಭೆ ನಡೆಸಲಿದ್ದು, ಚಂಡಮಾರುತದ ಪರಿಣಾಮ, ಹಾನಿ, ಪರಿಹಾರ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

Exit mobile version