ಪಾಟ್ನಾ: 16ನೇ ಶತಮಾನದ ಭಕ್ತಿಕವಿ ತುಳಸಿದಾಸರು, ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ರಚಿಸಿರುವ ‘ರಾಮಚರಿತ ಮಾನಸ’ (Ramcharitmanas Row) ಹಿಂದುಗಳ ಪಾಲಿಗೆ ಪವಿತ್ರ ಧಾರ್ಮಿಕ ಗ್ರಂಥ. ಈ ಪವಿತ್ರ ಗ್ರಂಥದ ಬಗ್ಗೆ ಬಿಹಾರ ಶಿಕ್ಷಣ ಸಚಿವ, ಆರ್ಜೆಡಿ ನಾಯಕ ಡಾ.ಚಂದ್ರಶೇಖರ್ ಅವರು ವಿವಾದಿತ ಮಾತುಗಳನ್ನಾಡಿ, ಹಲವು ಧಾರ್ಮಿಕ ಮುಖಂಡರ ಅಷ್ಟೇ ಅಲ್ಲ, ಬಿಹಾರದಲ್ಲಿ ಜೆಡಿಯು ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರದ್ದೇ ಪಕ್ಷದ ಒಂದಷ್ಟು ನಾಯಕರೂ ಕೂಡ ಡಾ. ಚಂದ್ರಶೇಖರ್ ಮಾತುಗಳಿಗೆ ವಿರೋದ ವ್ಯಕ್ತಪಡಿಸಿದ್ದಾರೆ.
ನಳಂದಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ಸಚಿವ ಚಂದ್ರಶೇಖರ್ ಅವರು ‘ಮನುಸ್ಮೃತಿ ಮತ್ತು ರಾಮಚರಿತ ಮಾನಸದಂಥ ಗ್ರಂಥಗಳು ಸಮಾಜದಲ್ಲಿ ದ್ವೇಷ ಹುಟ್ಟುಹಾಕುತ್ತಿವೆ. ಸಮಾಜವನ್ನು ಒಡೆಯುತ್ತಿವೆ’ ಎಂದು ಹೇಳಿದ್ದರು. ಈ ಹೇಳಿಕೆ ಅದೆಷ್ಟೋ ಧಾರ್ಮಿಕ ನಾಯಕರಿಗೆ, ಸಾಮಾನ್ಯ ಜನರಿಗೆ ಸಹ್ಯವಾಗಲಿಲ್ಲ. ಬಿಹಾರದಲ್ಲಿ ಜೆಡಿಯು ಮತ್ತು ಆರ್ಜೆಡಿ ಮೈತ್ರಿ ಸರ್ಕಾರವಿದೆ. ಆದರೆ ಚಂದ್ರಶೇಖರ್ ಆಡಿದ ಮಾತುಗಳು ಈ ಮೈತ್ರಿಯಲ್ಲೇ ಬಿರುಕು ತರುತ್ತಿವೆ. ಜೆಡಿಯು ನಾಯಕರು ಬಲವಾಗಿ ಖಂಡಿಸುತ್ತಿದ್ದಾರೆ. ಶನಿವಾರ (ಜ.14)ವಂತೂ ಜೆಡಿಯು ವಕ್ತಾರ ನೀರಜ್ ಕುಮಾರ್ ಮತ್ತು ಅವರ ಅಪಾರ ಬೆಂಬಲಿಗರು ಸೇರಿ ಡಾ. ಚಂದ್ರಶೇಖರ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಆಂಜನೇಯನ ದೇವಸ್ಥಾನಕ್ಕೆ ತೆರಳಿ, ಅಲ್ಲಿ ರಾಮಚರಿತ ಮಾನಸ ಗ್ರಂಥದಲ್ಲಿರುವ ಕೆಲವು ಶ್ಲೋಕಗಳನ್ನು ಓದುವ ಮೂಲಕ ಶಿಕ್ಷಣ ಸಚಿವರ ಹೇಳಿಕೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಆರ್ಜೆಡಿ ನಾಯಕರಿಂದಲೂ ಅಸಮಾಧಾನ
ಶಿಕ್ಷಣ ಸಚಿವ ಡಾ. ಚಂದ್ರಶೇಖರ್ ಹೇಳಿಕೆಯನ್ನು ಅವರದ್ದೇ ಪಕ್ಷದ ಎಲ್ಲ ನಾಯಕರೂ ಅನುಮೋದಿಸುತ್ತಿಲ್ಲ. ಡಾ. ಚಂದ್ರಶೇಖರ್ ಹೇಳಿದ್ದು ಸರಿಯಾಗಿದೆ, ರಾಮಚರಿತ ಮಾನಸದಲ್ಲಿರುವ ಅಂಶಗಳನ್ನು ಸಮಾಜವನ್ನು ಒಡೆಯುತ್ತಿವೆ ಎಂದು ಆರ್ಜೆಡಿ ರಾಜ್ಯಾಧ್ಯಕ್ಷ ಜಗದಾನಂದ ಸಿಂಗ್ ಹೇಳಿದ್ದಾರೆ. ಆದರೆ ಆರ್ಜೆಡಿ ಹಿರಿಯ ನಾಯಕ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ ತಿವಾರಿ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಚಂದ್ರಶೇಖರ್ ಹೇಳಿಕೆ ಮತ್ತು ಅವರಿಗೆ ಜಗದಾನಂದ್ ನೀಡುತ್ತಿರುವ ಬೆಂಬಲವೆಲ್ಲ ಅವರವರ ವೈಯಕ್ತಿಕವೇ ಹೊರತು, ಪಕ್ಷದ ನಿಲುವುಗಳಲ್ಲ. ಪಕ್ಷಕ್ಕೂ, ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಹಾಗೇ, ಈ ವಿಚಾರವನ್ನು ಆದಷ್ಟು ಬೇಗ ಆರ್ಜೆಡಿ ನಾಯಕ, ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಎದುರು ಕೊಂಡೊಯ್ಯಲಾಗುವುದು ಎಂದೂ ಹೇಳಿದ್ದಾರೆ.
ಇಷ್ಟೆಲ್ಲ ಆದರೂ ಬಿಹಾರ ಶಿಕ್ಷಣ ಸಚಿವರು ಮಾತ್ರ ತಮ್ಮ ಹೇಳಿಕೆ ಸರಿ ಎಂದೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೋರುವುದಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಅವರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ.
ಇದನ್ನೂ ಓದಿ: Ramcharitmanas Row | ರಾಮಚರಿತಮಾನಸ ವಿವಾದ, ಸಚಿವ ಚಂದ್ರಶೇಖರ್ ನಾಲಗೆ ಕತ್ತರಿಸಿದರೆ 10 ಕೋಟಿ ರೂ. ಬಹುಮಾನ ಘೋಷಣೆ