Site icon Vistara News

1985ರ ಏರ್‌ ಇಂಡಿಯಾ ಬಾಂಬ್‌ ಸ್ಫೋಟ ಆರೋಪ ಹೊತ್ತಿದ್ದ ರಿಪುದಮನ್‌ ಸಿಂಗ್‌ ಮಲಿಕ್‌ ಕೆನಡಾದಲ್ಲಿ ಹತ್ಯೆ

Ripudaman Singh Malik

ನವ ದೆಹಲಿ: 1985 ರಲ್ಲಿ ನಡೆದಿದ್ದ ಏರ್‌ ಇಂಡಿಯಾ ಬಾಂಬ್‌ ದುರಂತ ಪ್ರಕರಣದಲ್ಲಿ ಆರೋಪಿಯೆನಿಸಿ, ನಂತರ ಖುಲಾಸೆಗೊಂಡಿದ್ದ ಕೆನಡಾ ಮೂಲದ ಸಿಖ್‌ ನಾಯಕ ರಿಪುದಮನ್‌ ಸಿಂಗ್‌ ಮಲಿಕ್‌ನನ್ನು ಗುರುವಾರ ಮುಂಜಾನೆ ಕೆನಡಾದ ಸರ‍್ರೆ ಎಂಬಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಈ ಬಗ್ಗೆ ಕೆನಡಾದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಗುರುವಾರ ಬೆಳಗ್ಗೆ 9.30ರ ಹೊತ್ತಿಗೆ ಫೈರಿಂಗ್‌ ನಡೆದಿದ್ದು, ರಿಪುದಮನ್‌ ಸಿಂಗ್‌ ಮಲಿಕ್‌ನನ್ನು ಟಾರ್ಗೆಟ್‌ ಮಾಡಿಯೇ ಹತ್ಯೆ ಮಾಡಲಾಗಿದೆ. ಆರೋಪಿಗಳು ನಂತರ ಎಸ್‌ಯುವಿ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ.

1985ರ ಜೂ.23ರಂದು ಏರ್‌ ಇಂಡಿಯಾ 182ರ ಎಂಪರರ್‌ ಕನಿಷ್ಕಾ ಎಂಬ ಹೆಸರಿನ ಬೋಯಿಂಗ್‌ 747 ವಿಮಾನದಲ್ಲಿ ವಾಯುಮಾರ್ಗ ಮಧ್ಯೆ ಬಾಂಬ್‌ ಸ್ಫೋಟ ಉಂಟಾಗಿತ್ತು. ಈ ವಿಮಾನ ಕೆನಡಾದ ಮೊಂಟ್ರಿಯಲ್‌ನಿಂದ ಟೇಕ್‌ಆಫ್‌ ಆಗಿ ಮುಂಬೈಗೆ ಆಗಮಿಸುತ್ತಿತ್ತು. ಮಧ್ಯ ಲಂಡನ್‌ನಲ್ಲಿ ಕೂಡ ಒಮ್ಮೆ ಲ್ಯಾಂಡ್‌ ಆಗಬೇಕಿತ್ತು. ಅಟ್ಲಾಂಟಿಕ್‌ ಸಾಗರದ ಮೇಲ್ಭಾಗದಲ್ಲಿ ಸುಮಾರು 31 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಬಾಂಬ್‌ ಸ್ಫೋಟಿಸಿ, ವಿಮಾನ ಸಾಗರಕ್ಕೆ ಬಿದ್ದಿತ್ತು. ವಿಮಾನದಲ್ಲಿದ್ದ 329 ಪ್ರಯಾಣಿಕರು ಮೃತಪಟ್ಟಿದ್ದರು. ಅದರಲ್ಲಿ ಕೆನಡಾದ ವಲಸಿಗರು 268, ಬ್ರಿಟಿಷ್‌ ನಾಗರಿಕರು 27 ಮತ್ತು ಭಾರತದ 24 ನಾಗರಿಕರು ಇದ್ದರು. ಈ ಬಾಂಬ್‌ ಇಟ್ಟಿದ್ದು ಕೆನಡಾದಲ್ಲಿರುವ ಉಗ್ರವಾದಿ ಸಿಖ್‌ರು ಎಂಬುದು ಖಚಿತವಾಗಿತ್ತು. ಹಾಗೇ, ಏರ್‌ ಇಂಡಿಯಾ ಇತಿಹಾಸದಲ್ಲೇ ಇದೊಂದು ಭಯಾನಕ ದುರಂತ ಎಂದು ಪರಿಗಣಿಸಲ್ಪಟ್ಟಿದೆ.

ಇದನ್ನೂ ಓದಿ: Hockey World Cup | ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಭಾರತೀಯ ವನಿತೆಯರಿಗೆ ಕೆನಡಾ ವಿರುದ್ಧ ಜಯ

ಈ ವಿಮಾನ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ರಿಪುದಮನ್‌ ಸಿಂಗ್‌ ಮಲಿಕ್‌, ಇಂದ್ರಜಿತ್‌ ಸಿಂಗ್‌ ರೇಯತ್‌ ಮತ್ತು ಅಜೈಬ್‌ ಸಿಂಗ್‌ ಬಾಗ್ರಿ ಪ್ರಮುಖ ಆರೋಪಿಗಳು ಎಂದು ಹೇಳಲಾಗಿತ್ತು. ಸುದೀರ್ಘ ಕಾಲ ಕೋರ್ಟ್‌ನಲ್ಲಿ ವಿಚಾರಣೆ ನಡೆದ ಬಳಿಕ 2005ರಲ್ಲಿ ಕೆನಡಾದ ಕೋರ್ಟ್‌ವೊಂದು ಮಲಿಕ್‌ನನ್ನು ಖುಲಾಸೆಗೊಳಿಸಿತ್ತು. ರಿಪುದಮನ್‌ ಸಿಂಗ್‌ ಮಲಿಕ್‌ ಕೆನಡಾದಲ್ಲಿ ಪ್ರತ್ಯೇಕತಾ ಗುಂಪಿನ ಮುಖಂಡನಾಗಿದ್ದರೂ, ಹಲವು ಕಡೆಗಳಲ್ಲಿ ಖಾಲಸಾ ಶಾಲೆಗಳನ್ನು ನಡೆಸುತ್ತಿದ್ದ. (ಖಾಲಸಾ ಎಂದರೆ ಪವಿತ್ರ ಎಂಬ ಅರ್ಥವನ್ನು ಕೊಡುತ್ತದೆ. ಸಿಖ್‌ ಸಮುದಾಯದ ಪ್ರಮುಖ ಸಂಪ್ರದಾಯ, ಬದ್ಧತೆ ಇದು). ರಿಯಲ್‌ ಎಸ್ಟೇಟ್‌, ಫೈನಾನ್ಸ್‌ ಕಂಪನಿಗಳೂ ಈತನ ಹೆಸರಿನಲ್ಲಿ ಇದ್ದವು. ಮೂಲತಃ ಪಂಜಾಬ್‌ನವನಾಗಿದ್ದ.

ರಿಪುದಮನ್‌ ಸಿಂಗ್‌ ಇತ್ತೀಚೆಗಷ್ಟೇ ಅಂದರೆ ಮೇ ತಿಂಗಳಲ್ಲಿ ಭಾರತಕ್ಕೆ ಧಾರ್ಮಿಕ ಯಾತ್ರೆ ಕೈಗೊಂಡಿದ್ದ. ಆಂಧ್ರಪ್ರದೇಶ, ದೆಹಲಿ, ಪಂಜಾಬ್‌ ಮತ್ತು ಮಹಾರಾಷ್ಟ್ರಗಳಿಗೆ ಭೇಟಿ ಕೊಟ್ಟಿದ್ದ. ಅದಕ್ಕೂ ಮುಖ್ಯವಾಗಿ, ಈ ವರ್ಷ ಪಂಜಾಬ್‌ ವಿಧಾನಸಭೆ ಚುನಾವಣೆಗೂ ಪೂರ್ವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದ ಮಲಿಕ್‌, ಭಾರತದಲ್ಲಿರುವ ಸಿಖ್‌ ಸಮುದಾಯದವರಿಗಾಗಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದ. ಅಷ್ಟೇ ಅಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ದೂಷಿಸುವವರಿಗೆ ಖಡಕ್‌ ಎಚ್ಚರಿಕೆಯನ್ನೂ ಕೊಟ್ಟಿದ್ದ.

ಇದನ್ನೂ ಓದಿ: ಕೆನಡಾದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ವಿರೂಪ, ಖಲಿಸ್ತಾನಿಗಳ ಕೃತ್ಯ ಶಂಕೆ, ಭಾರತ ಆಕ್ರೋಶ

Exit mobile version