ಮುಂಬೈ: ರಾಜ್ಯದ ರಾಯಗಢದ ಖೋಪೋಲಿ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಖಾಸಗಿ ಬಸ್ ಹಳ್ಳಕ್ಕೆ ಬಿದ್ದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಖಾಸಗಿ ಬಸ್ ಪುಣೆಯ ಪಿಂಪಲ್ ಗುರವ್ನಿಂದ ಗೋರೆಗಾಂವ್ಗೆ ತೆರಳುತ್ತಿದ್ದಾಗ ಪುಣೆ-ರಾಯಗಢ ಗಡಿಯಲ್ಲಿ ಮುಂಜಾನೆ 4:30ಕ್ಕೆ ಅಪಘಾತ ಸಂಭವಿಸಿದೆ. ಮುಂಜಾನೆ ನಿದ್ದೆ ಮಂಪರಿನಲ್ಲಿದ್ದ ಚಾಲಕ ತಿರುವಿನಲ್ಲಿ ನಡೆಸಿದ ಅಜಾಗರೂಕ ಚಾಲನೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಅಪಘಾತದ ವೇಳೆ ಬಸ್ನಲ್ಲಿ 41 ಮಂದಿ ಪ್ರಯಾಣಿಕರಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಇತರ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
ಕಾರು ಅಪಘಾತ, ಬಾಬುರಾವ್ ಚಿಂಚನಸೂರ್ಗೆ ಗಾಯ
ಕಲಬುರಗಿ: ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಕಾರು ಅಪಘಾತಕ್ಕೀಡಾಗಿದ್ದು, ಚಿಂಚನಸೂರ್ ಅವರಿಗೆ ಲಘು ಗಾಯಗಳಾಗಿವೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಾಬುರಾವ್ ಯಾದಗಿರಿಯಿಂದ ಕಲಬುರಗಿಗೆ ಹೋಗುವಾಗ ಈ ಘಟನೆ ನಡೆದಿದೆ. ರಾತ್ರಿ 12:30ರ ಸುಮಾರಿಗೆ ಕಲಬುರಗಿ ಆಕಾಶವಾಣಿ ಕೇಂದ್ರದ ಬಳಿ ಈ ಘಟನೆ ನಡೆದಿದೆ.
ಅಪಘಾತದಲ್ಲಿ ಚಿಂಚನಸೂರ್ ಕಾಲು ಮತ್ತು ಮುಖಕ್ಕೆ ಗಾಯಗಳಾಗಿವೆ. ರಸ್ತೆಯ ಮಧ್ಯೆ ಇದ್ದ ಗುಂಡಿಗೆ ಕಾರಿನ ಟೈರ್ ಬೀಳುತ್ತಿದ್ದ ಹಾಗೆ ಸ್ಕಿಡ್ ಆಗಿ ಬಿದ್ದಿದೆ. ವಾಹನ ಚಾಲಕ ನಿದ್ದೆಯ ಮಂಪರಿನಲ್ಲಿ ಇದ್ದುದರಿಂದ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಚಿಂಚನಸೂರ್ ಅವರನ್ನು ಸ್ಥಳೀಯರ ಸಹಕಾರದಿಂದ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಾಲಕ ಮತ್ತು ಗನ್ಮ್ಯಾನ್ಗೆ ಯಾವುದೇ ಗಾಯಗಳು ಆಗಿಲ್ಲ.
ಇದನ್ನೂ ಓದಿ: Road Accident: ತುಮಕೂರು ಹಿರೇಹಳ್ಳಿ ಹೆದ್ದಾರಿ ಬಳಿ ಕಾರು-ಬಸ್ ನಡುವೆ ಅಪಘಾತ; ಮಗು ಸೇರಿ ಐವರು ಸ್ಥಳದಲ್ಲೇ ಮೃತ್ಯು