ರಾಜಸ್ಥಾನದ ಜೈಪುರ-ಅಜ್ಮೇರ್ ಹೆದ್ದಾರಿಯಲ್ಲಿ (Jaipur Ajmer Road) ಟ್ರಕ್ವೊಂದು ರಸ್ತೆ ಪಕ್ಕ ನಿಲ್ಲಿಸಿದ್ದ ಎರಡು ಲಾರಿಗಳಿಗೆ ಡಿಕ್ಕಿ (Truck Accident) ಹೊಡೆದು ಐವರು ಸಜೀವ ದಹನಗೊಂಡಿದ್ದಾರೆ. ಹಾಗೇ, 12 ಜಾನುವಾರುಗಳು ಸುಟ್ಟು ಭಸ್ಮಗೊಂಡಿವೆ. ಜೈಪುರ ಗ್ರಾಮಾಂತರದ ಡುಡು ಎಂಬಲ್ಲಿ ಈ ಅಪಘಾತ (Road Accident) ನಡೆದಿದೆ. ರಸ್ತೆ ಪಕ್ಕ ಎರಡು ಟ್ರಕ್ಗಳು ಇದ್ದವು. ಒಂದು ಟ್ರಕ್ ವೇಗವಾಗಿ ಬಂದು ಅದೆರಡಕ್ಕೂ ಡಿಕ್ಕಿ ಹೊಡೆದಿದೆ. ಈ ಅವಘಡದಿಂದ ಬೆಂಕಿ ಹೊತ್ತಿಕೊಂಡ (Trucks catch fire) ಪರಿಣಾಮ, ಮೂರೂ ಟ್ರಕ್ಗಳು ಬೆಂಕಿಗೆ ಆಹುತಿಯಾಗಿವೆ. ಮೂರು ಟ್ರಕ್ಗಳ ಚಾಲಕರು ಸೇರಿ ಒಟ್ಟು ಐವರು ಸಜೀವ ದಹನಗೊಂಡಿದ್ದಾರೆಂದು ಜೈಪುರ ಗ್ರಾಮಾಂತರ ವಿಭಾಗದ ಎಎಸ್ಪಿ ದಿನೇಶ್ ಶರ್ಮಾ ತಿಳಿಸಿದ್ದಾರೆ.
ಹೀಗೆ ಡಿಕ್ಕಿ ಹೊಡೆದ ಟ್ರಕ್ನಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಇದು ಇಂದು ಮುಂಜಾನೆ 5.30ರ ಹೊತ್ತಿಗೆ ಹರ್ಯಾಣದಿಂದ ಪುಣೆಗೆ ಹೋಗುತ್ತಿತ್ತು. ಚಾಲಕ ನಿದ್ದೆಗೆ ಜಾರಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಗೇ, ಮೃತರು ಪವನ್ (28), ಸಂಜು (18), ಧರ್ಮವೀರ್ (34)-ಇವರೆಲ್ಲ ಹರ್ಯಾಣದವರು. ಹಾಗೇ, ಜಾನ್ ವಿಜಯರ್ (35), ಬಿಜ್ಲಿ (26)-ಇವರು ಪಂಜಾಬ್ನವರು. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Road Accident: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಮತ್ತೆ ಅಪಘಾತ; ಇಬ್ಬರ ಸಾವು
ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಒಂದು ಟ್ರಕ್ನಲ್ಲಿ ನೂಲಿನ ಬಂಡಲ್ ಇದ್ದರೆ, ಇನ್ನೊಂದರಲ್ಲಿ ಪ್ಲಾಸ್ಟಿಕ್ ಬ್ಯಾಗ್ಗಳು ಇದ್ದವು. ಹೀಗಾಗಿ ಡಿಕ್ಕಿಯಲ್ಲಿ ಡೀಸೆಲ್ ಟ್ಯಾಂಕ್ಗಳು ಸ್ಫೋಟವಾಗುತ್ತಿದ್ದಂತೆ, ಒಮ್ಮೆಲೇ ಬೆಂಕಿ ವೇಗವಾಗಿ ಪಸರಿಸಿತು ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಜೈಪುರ ಜಿಲ್ಲಾಧಿಕಾರಿ ಪ್ರಕಾಶ್ ರಾಜ್ಪುರೋಹಿತ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.