ಉತ್ತರ ಪ್ರದೇಶದ ಘಾಜಿಯಾಬಾದ್ನ ದೆಹಲಿ-ಮೀರತ್ ಎಕ್ಸ್ಪ್ರೆಸ್ವೇ (Delhi Meerut Expressway) ನಲ್ಲಿ ಬೆಳ್ಳಂಬೆಳಗ್ಗೆಯೇ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಭೀಕರ ಅಪಘಾತ (Road Accident) ಉಂಟಾಗಿದೆ. ಶಾಲಾ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿಯಾಗಿ (Bus Car Collision) 6 ಮಂದಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ 8ವರ್ಷದ ಬಾಲಕನೊಬ್ಬ ಬದುಕುಳಿದಿದ್ದು, ತೀವ್ರವಾಗಿ ಗಾಯಗೊಂಡಿದ್ದಾನೆ. ಸದ್ಯ ಅವನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಪೋಸ್ಟ್ಮಾರ್ಟಮ್ಗೆ ಕಳಿಸಲಾಗಿದೆ.
ಕಾರಿಗೆ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರು ನಜ್ಜುಗುಜ್ಜಾಗಿತ್ತು. ಕಾರಿನೊಳಗೆ ಇದ್ದವರ ಮೃತದೇಹ ಪೂರ್ತಿ ತುಂಡುತುಂಡಾಗಿದೆ. ಅವುಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಅಪಘಾತ ನಡೆಯುತ್ತಿದ್ದಂತೆ ಸ್ಥಳದಲ್ಲಿ ಟ್ರಾಫಿಕ್ ಉಂಟಾಗಿತ್ತು. ಕಾರಿನ ಬಾಗಿಲು ತೆಗೆಯಲು ಸಾಧ್ಯವಾಗದೆ, ಅದನ್ನು ಕತ್ತರಿಸಲಾಗಿದೆ ಎಂದು ವರದಿಯಾಗಿದೆ. ಇನ್ನು ಶಾಲಾ ಬಸ್ನಲ್ಲಿ ಮಕ್ಕಳಿದ್ದರು. ಚಾಲಕ ತಪ್ಪಾದ ದಿಕ್ಕಿನಲ್ಲಿ ಸಾಗಿ, ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Road Accident : ಸವಾರನ ಎದೆಗೆ ಅಪ್ಪಳಿಸಿತ್ತು ಮತ್ತೊಂದು ಬೈಕ್!
ಸೋಮವಾರ (ಜು.10) ಉತ್ತರ ಪ್ರದೇಶದ ಪ್ರತಾಪ್ಗಢ್ನ ಲೀಲಾಪುರ್ ಎಂಬಲ್ಲಿ ಗ್ಯಾಸ್ ಟ್ಯಾಂಕರ್ವೊಂದು ಟೆಂಪೋ ಮೇಲೆ ಉರುಳಿಬಿದ್ದು 9 ಮಂದಿ ಮೃತಪಟ್ಟಿದ್ದರು. ಈ ಘಟನೆ ನಡೆದಿದ್ದು ಲಖನೌ-ವಾರಾಣಸಿ ಹೆದ್ದಾರಿಯಲ್ಲಿ ಆಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಹಾಗೇ, ಗಾಯಗೊಂಡವರ ಚಿಕಿತ್ಸೆಗಾಗಿ ತಲಾ 50 ಸಾವಿರ ರೂ. ನೆರವು ನೀಡುವುದಾಗಿ ಹೇಳಿದ್ದಾರೆ.